Saturday, February 18, 2012

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರಗತಿ ಪರಿಶೀಲನಾ ಸಭೆ

ಮಂಗಳೂರು,ಫೆಬ್ರವರಿ.18:ಸಣ್ಣ ನೀರಾವರಿ ಇಲಾಖೆಯವರಿಗೆ ಜಿಲ್ಲೆಯಲ್ಲಿ 43 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಮಂಜೂರಾತಿ ನೀಡಿದ್ದರೂ ಕಾಮಗಾರಿ ಅನುಷ್ಠಾನ ತೃಪ್ತಿಕರವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಬಿ ಎಸ್ ರಾಮ್ ಪ್ರಸಾದ್ ಹೇಳಿದರು. ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಮಾತನಾಡುತ್ತಿದ್ದರು.ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪಡೆದ ಉಸ್ತುವಾರಿ ಕಾರ್ಯದರ್ಶಿಗಳು, ನೀರಾವರಿ ಪ್ರಮುಖ ವಲಯವಾಗಿದ್ದು, ಜಿಲ್ಲೆಯಲ್ಲಿ ನೀರಾವರಿಗೆ ಪೂರಕ ಯೋಜನೆಗಳ ಅನುಷ್ಠಾನದಲ್ಲಿ ಸಣ್ಣ ನೀರಾವರಿ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸಮಾಡಬೇಕೆಂದರು. ಕಾಮಗಾರಿ ಸಂಪೂರ್ಣಗೊಂಡ ಬಳಿಕ ಪರಿಶೀಲನಾ ಸಮಿತಿ ಕಾಮಗಾರಿಯನ್ನು ಪರಿಶೀಲಿಸಲಿದೆ ಎಂದರು.
13 ಕೆರೆಗಳ ಪುನರುಜ್ಜೀವನಕ್ಕೆ 382 ಲಕ್ಷ ರೂ. ಬಿಡುಗಡೆ ಮಾಡಿದ್ದರೂ ಅದರಲ್ಲಿ ಕೇವಲ 2 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿದೆ. ನಿಗದಿತ ಗುರಿ ಸಾಧಿಸಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದ್ದು, ಸಮಸ್ಯೆ ಏನು ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕೆಂದು ಸಣ್ಣ ನೀರಾವರಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ವಿಶೇಷ ಘಟಕ ಯೋಜನೆಯಡಿ ಮಹಾನಗರಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳು ಶೇಕಡ 45 ಅಭಿವೃದ್ಧಿ ದಾಖಲಿಸಿದ್ದು ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಪರಿಶಿಷ್ಟರಿಗೆ ಮೀಸಲಿರಿಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೆಂದರು.
ಜಿಲ್ಲಾ ಪಂಚಾಯತ್ ಗೆ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ಅನುದಾನದ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು. ರಾಜ್ಯ ಮಟ್ಟದಲ್ಲಿ ಬಾಕಿ ಇರುವ ಜಿಲ್ಲೆಗಳ ಕೆಲಸಗಳ ಬಗ್ಗೆ ವಿವಿಧ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿಗಳು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.
42 ಕಿ ಮೀ ಮಾಣಿ-ಸಂಪಾಜೆ ರಸ್ತೆಯನ್ನು ಕೆ ಆರ್ ಡಿಸಿಎಲ್ ನವರು 14 ಕಿ.ಮೀ ಅಭಿವೃದ್ಧಿ ಪಡಿಸಿದ್ದು ಮೇ ಅಂತ್ಯದೊಳಗೆ ಕಾಮಗಾರಿ ಮುಗಿಸುವ ಭರವಸೆಯನ್ನು ನೀಡಿದರು. ಪ್ರಗತಿ ಪರಿಶೀಲನಾ ವರದಿಯನ್ನು ತಾವು ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದು ಸಭೆಯಲ್ಲಿ ನೀಡಿದ ಮಾಹಿತಿ ಹಾಗೂ ಗುರಿ ನಿಗದಿ ಸಾಧನೆ ನಿಖರವಾಗಿರಬೇಕು ಎಂದು ಉಸ್ತುವಾರಿ ಕಾರ್ಯ ದರ್ಶಿಗಳು ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಎಚ್ಚರಿಸಿದರು.
ಸುಳ್ಯದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯೂ ಫೆಬ್ರವರಿ ಅಂತ್ಯದೊಳಗೆ ಮುಗಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಏರ್ ಪೋರ್ಟ್ ಎಕ್ಸಿಟ್ ರೋಡ್ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿ, ಕಾಮಗಾರಿ ಆರಂಭಿಸಲು ಬೇಕಿರುವ ಕ್ರಮಕೈಗೊಳ್ಳಲು ಸೂಚಿಸಿದರು.ಲೋಕೋಪಯೋಗಿ ಇಲಾಖೆಯು ಶೇಕಡ 90ರಷ್ಟು ಕಾಮಗಾರಿಗಳನ್ನು ಸಂಪೂರ್ಣ ಗೊಳಿಸಿದ್ದು, ಸುಳ್ಯ ಮಿನಿ ವಿಧಾನಸೌಧ ಮಾರ್ಚ್ ಒಳಗಡೆ, ನಗರದ ಕೋರ್ಟ್ ಕಟ್ಟಡ ಆದಷ್ಟು ಬೇಗ ಸಂಪೂರ್ಣ ಗೊಳಿಸ ಲಾಗುವುದು ಎಂದರು. ಮಂಗಳೂರು ಮಿನಿ ವಿಧಾನ ಸೌಧವನ್ನು ಮೇ ಒಳಗಡೆ ಬಿಟ್ಟುಕೊಡಲಾಗುವುದು ಎಂದು ಕಾರ್ಯಪಾಲಕ ಇಂಜಿನಿಯರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಭಿವೃದ್ಧಿ ವರದಿ ಪಡೆದ ಕಾರ್ಯದರ್ಶಿ ಗಳು, ಭಾಗ್ಯಲಕ್ಷ್ಮಿ ಬಾಂಡ್ ಗಳ ವಿತರಣೆ ಮಾಹಿತಿ ಕೇಳಿದರು. 17,000ದಷ್ಟು ಬಾಂಡ್ ಗಳನ್ನು ಈವರೆಗೆ ಜಿಲ್ಲೆಯಲ್ಲಿ ವಿತರಿಸಲಾಗಿದ್ದು, 4,351 ಬಾಂಡ್ ವಿತರಣೆ ಬಾಕಿ ಇದೆ ಎಂದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಚಾರಿಸಿದಾಗ, ಕಳೆದ ಸಾಲಿನ ಸಮಸ್ಯೆಗಳನ್ನು ಗಮನದಲ್ಲಿರಿಸಿ ಕ್ರಿಯಾ ಯೋಜನೆ ರೂಪಿಸಿದ್ದು, ಯಾವುದೇ ಗಂಭೀರ ಸಮಸ್ಯೆಗಳಿಲ್ಲ. ಎದುರಾಗುವ ಸಮಸ್ಯೆಗಳನ್ನು ಬಗೆ ಹರಿಸಲು ಟಾಸ್ಕ್ ಫೋರ್ಸ್ ಗೆ 60 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ನೀರಿನ ದೂರು ಆಲಿಸಲು ತಾಲೂಕು ಪಂಚಾಯತ್ ಗಳಲ್ಲಿ ಕೌಂಟರ್ ಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು. ಜಿಲ್ಲೆಯಲ್ಲಿ ಕಿನ್ನಿಗೋಳಿ ಮತ್ತು ಮಳವೂರಿನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿಯನ್ನು ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿಗಳು ನೀಡಿದರು.
ಆರ್ ಟಿ ಒಗೆ ಬೇರೆ ಜಾಗ ನೀಡುವ ಬಗ್ಗೆ, ನೋಂದಣಿ ಇಲಾಖೆಯಲ್ಲಿ ಹೊಸ ಸಾಫ್ಟ್ ವೇರ್ ಅಳವಡಿಸಿರುವುದರಿಂದ ಆಗಿರುವ ಸಮಸ್ಯೆ ಬಗ್ಗೆ, ಅವರ ಕಟ್ಟಡ ಸಮಸ್ಯೆಗಳ ಬಗ್ಗೆ, ಜನರಿಗಾಗುತ್ತಿರುವ ತೊಂದರೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಭಾಧ್ಯಕ್ಷರ ಗಮನಸೆಳೆದರು.
ಇಂದಿರಾಗಾಂಧಿ ವಸತಿಯೋಜನೆಯಡಿ 2233ಮನೆಗಳಿಗೆ ಅರ್ಜಿ ಸ್ವೀಕರಿಸಿದ್ದು,2004 ಅರ್ಜಿಗಳು ಆಯ್ಕೆಯಾಗಿದೆ. 56 ಮನೆಗಳು ಸಂಪೂರ್ಣಗೊಂಡಿವೆ. 601 ಮನೆಗಳು ವಿವಿಧ ಹಂತದಲ್ಲಿವೆ. 1347 ಮನೆಗಳ ಕಾಮಗಾರಿ ಆರಂಭವಾಗಿದೆ. ಒಟ್ಟು 1,92,000 ಖರ್ಚಾಗಿದೆ ಎಂದು ಮುಖ್ಯ ಯೋಜನಾಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ಕೊರಗರ ಮನೆ ನಿರ್ಮಾಣದ ಕಾಮಗಾರಿಯಡಿ 1.090 ಕುಟುಂಬಗಳಿಗೂ ಮನೆ ಒದಗಿಸುವಂತೆ ಜಿಲ್ಲಾಧಿಕಾರಿಗಳು ಹೇಳಿದರು.
ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಸುವರ್ಣಭೂಮಿ ಯೋಜನೆಯಡಿ ರೈತರಿಗೆ ಎರಡನೇ ಹಂತದಲ್ಲಿ ಬಿಡುಗಡೆಯಾಗಬೇಕಿದ್ದ ಹಣವನ್ನು ಮಾರ್ಚ್ 15ಕ್ಕೆ ಪಾವತಿಸಲು ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ ವಾರ್ಡನ್ ಹುದ್ದೆ ತುಂಬಲಾಗಿದ್ದು, ಬಿಸಿ ಎಂ ಹಾಸ್ಟೆಲ್ ಗಳಿಗೆ ಜಾಗ ಗುರುತಿಸಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದರು. ಸಿಂಥೆಟಿಕ್ ಟ್ರ್ಯಾಕ್ ಬಗ್ಗೆ, ಗಣಿ ಮತ್ತು ಭೂವಿಜ್ಞಾನದಿಂದ ಸುರಕ್ಷಾ ವಲಯ ಗುರುತಿಸುವ ಬಗ್ಗೆ, ಈ ಸಂದರ್ಭದಲ್ಲಿ ಪರಿಸರ ಇಲಾಖೆ ಜೊತೆಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.
ಮಹಾತ್ಮಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 22.97 ಕೋಟಿ ರೂ. ಖರ್ಚಾಗಿದ್ದು, ಶೇಕಡಾ 50ರಷು ಹಣ ಖಚರ್ಾಗಿದೆ. ಉಳಿದ ಹಣವನ್ನು ಮಾಚ್ರ್ ಅಂತ್ಯದೊಳಗೆ ಖಚರ್ು ಮಾಡಲು ಸಮಗ್ರ ಯೋಜನೆ ರೂಪಿಸಿ ಎಂದ ಅವರು. ಸಾಮಾಜಿಕ ಸುರಕ್ಷಾ ಯೋಜನೆಗಳ ಫಲವನ್ನು ಅರ್ಹರಿಗೆ ತಲುಪಿಸುವ ಹೊಣೆ ಅಧಿಕಾರಿಗಳದ್ದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಪ್ರಭಾರ ಅಪರ ಜಿಲ್ಲಾಧಿಕಾರಿ ಕೆ ಟಿ ಕಾವೇರಿಯಪ್ಪ, ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಮತ್ತು ಇತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.