Tuesday, February 14, 2012

ಡಾ.ವಿ.ಎಸ್.ಆಚಾರ್ಯ ಅವರ ನಿಧನಕ್ಕೆ ಮುಖ್ಯಮಂತ್ರಿಯವರಿಂದ ಸಂತಾಪ :

ನನ್ನ ಸಚಿವ ಸಂಪುಟದ ಹಿರಿಯ ಸದಸ್ಯರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ:ವಿ.ಎಸ್.ಆಚಾರ್ಯರವರ ಹಠಾತ್ ನಿಧನ ನನಗೆ ಅತೀವ ದು:ಖವನ್ನು ಉಂಟುಮಾಡಿದೆ. ಜನಸಂಘದ ದಿನಗಳಿಂದಲೂ ಬಿ.ಜೆ.ಪಿ.ಯೊಡನೆ ಒಡನಾಟ ಹೊಂದಿದ್ದ ಡಾ:ಆಚಾರ್ಯ ಅವರು ವೈಯಕ್ತಿಕವಾಗಿ ನನಗೆ ಗುರು, ಹಿತೈಷಿ ಹಾಗೂ ಮಾರ್ಗದಶರ್ಿ ಯಾಗಿದ್ದರು. ಮುಖ್ಯಮಂತ್ರಿಯಾದ ನಂತರವೂ ಡಾ:ಆಚಾರ್ಯ ಅವರ ಮೌಲಿಕ ಮಾರ್ಗದರ್ಶನ ನನಗೆ ದೊರಕಿತ್ತು. ಅವರ ಅಪಾರ ಆಡಳಿತ ಅನುಭವ, ಸೌಮ್ಯ ಸ್ವಭಾವ ನನಗೆ ಪ್ರೇರಕ ಶಕ್ತಿಯಾಗಿತ್ತು. ಅವರ ನಿಧನ ತೀರಾ ಅನಿರೀಕ್ಷಿತ ಮತ್ತು ಆಘಾತಕಾರಿಯಾಗಿದೆ.
ಅತಿ ಕಿರಿಯ ವಯಸ್ಸಿನಲ್ಲಿ ಉಡುಪಿಯ ಪುರಸಭೆ ಅಧ್ಯಕ್ಷರಾಗಿ ಆಚಾರ್ಯ ಅವರು ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳು ಇಂದಿಗೂ ಸ್ಮರಣೀಯ. ಇಡೀ ದೇಶದಲ್ಲೇ ಮೊಟ್ಟ ಮೊದಲನೇ ಬಾರಿಗೆ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ರದ್ದುಮಾಡಿದ ಹೆಗ್ಗಳಿಕೆ ಅವರದು. 1975ರಿಂದ 1977ರ ತುರ್ತು ಪರಿಸ್ಥಿತಿ ಅವಧಿಯಲ್ಲಿ 19 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು. 1983ರಲ್ಲಿ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ಬಿ.ಜೆ.ಪಿ. ಶಾಸಕಾಂಗ ಪಕ್ಷದ ನಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದನ್ನು ಮರೆಯಲಾಗದು.
1996, 2002 ಮತ್ತು 2006ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ, 2006ರಿಂದ 2007ರವರೆಗೆ ವೈದ್ಯಕೀಯ ಶಿಕ್ಷಣ ಸಚಿವರಾಗಿ ಒಂದೇ ವರ್ಷದಲ್ಲಿ 6 ನೂತನ ಸಕರ್ಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಅವರದು. 2008ರ ನಂತರ ಗೃಹ ಖಾತೆ, ಉನ್ನತ ಶಿಕ್ಷಣ, ಮುಜರಾಯಿ, ಯೋಜನೆ, ಹೀಗೆ ಹಲವಾರು ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಅವರು ದಕ್ಷ ಆಡಳಿತಗಾರರೆಂದು ನಿರೂಪಿಸಿದ್ದರು.
ಡಾ.ಆಚಾರ್ಯರವರು ತಮ್ಮ ರಾಜಕೀಯ ಜೀವನದುದ್ದಕ್ಕೂ ದಕ್ಷತೆ, ಪ್ರಾಮಾಣಿಕತೆ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡು ಬಂದಂತಹ ಅತ್ಯಂತ ಧೀಮಂತ ನಾಯಕ. ಇಂತಹ ಒಬ್ಬ ಒಳ್ಳೆಯ ರಾಜಕಾರಣಿ ಹಾಗೂ ಉತ್ತಮ ಆಡಳಿತಗಾರರನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ನನಗೆ ಮತ್ತು ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ಡಾ.ಆಚಾರ್ಯರವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸಿ, ನಾನು ಹಾಗೂ ನನ್ನ ಪತ್ನಿ ಶೋಕತಪ್ತ ಕುಟುಂಬ ವರ್ಗ ಹಾಗೂ ಎಲ್ಲಾ ಹಿತೈಷಿಗಳಿಗೆ ಸಂತಾಪವನ್ನು ಈ ಮೂಲಕ ತಿಳಿಸುತ್ತೇವೆ.

ಸಹಿ/-

(ಡಿ.ವಿ. ಸದಾನಂದ ಗೌಡ)

ಮುಖ್ಯಮಂತ್ರಿ( ಕರ್ನಾಟಕ ಸರ್ಕಾರ)