Wednesday, September 1, 2010

ಅಕ್ಟೋಬರ್ ನಲ್ಲಿ ರೈತರ ಹಬ್ಬ ಕೃಷಿ ಮಹೋತ್ಸವ

ಮಂಗಳೂರು,ಸೆ.01: ರೈತರಿಗಾಗಿ, ರೈತರಿಂದ, ರೈತರಿಗೋಸ್ಕರ ಆಯೋಜಿಸಿರುವ ಹಬ್ಬ ಕೃಷಿ ಮಹೋತ್ಸವ. ಕೃಷಿಯನ್ನು ಲಾಭದಾಯಕವಾಗಿ ಮಾಡಲು ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ನೀಡಲು ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆಯನ್ನು ಪಡೆಯಲು ಕೃಷಿ ಮಹೋತ್ಸವ ಕಾರ್ಯ ಕ್ರಮವನ್ನು ಕೃಷಿ ಇಲಾಖೆ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ ಆವರಣದಲ್ಲಿ ಅಕ್ಟೋಬರ್ ನಲ್ಲಿ ಹಮ್ಮಿಕೊಂಡಿದೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ರೈತರಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಿಸಲು ಏಕಗವಾಕ್ಷಿ ವಿಸ್ತರಣಾ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ವಿವಿಧ ಅಭಿವೃದ್ಧಿ ಇಲಾಖೆಗಳಾದ ತೋಟಗಾರಿಕೆ, ಪಶುವೈದ್ಯಕೀಯ,ಜಲಾನಯನ,ರೇಷ್ಮೆ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮ ಮೂಡಿಸುವುದು ಕೃಷಿ ಮಹೋತ್ಸವದ ಉದ್ದೇಶವಾಗಿದೆ.
ಬೆಳೆ ವೈವಿದ್ಧೀಕರಣ, ವ್ಯವಸಾಯ ವೆಚ್ಚದಲ್ಲಿ ಕಡಿತ,ಹೆಚ್ಚು ಇಳುವರಿ, ಕೃಷಿಯೊಂದಿಗೆ ಪೂರಕ ಉಪ ಕಸುಬು ಗಳಾದ ಪಶುಸಂಗೋಪನೆ, ಕೋಳಿ,ಆಡು ಸಾಕಾಣಿಕೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆ ಗಳನ್ನು ನಮ್ಮ ರೈತರು ಅಳವಡಿಸಿ ಕೊಳ್ಳುವುದು ಅನಿವಾರ್ಯ ವಾಗಿದೆ. ಕೃಷಿ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವ ಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶ. ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ, ವಿಜ್ಞಾನಿಗಳೊಂದಿಗೆ ರೈತರ ಸಂವಾದವನ್ನು ಮಹೋತ್ಸವ ಕಾರ್ಯಕ್ರಮ ಒಳಗೊಂಡಿದೆ.
ಕೃಷಿ ಮಹೋತ್ಸವ ಸಮಗ್ರ ಕೃಷಿ ಮಾಹಿತಿ ಘಟಕ, ವಸ್ತು ಪ್ರದರ್ಶನದ ಮೂಲಕ ಮಾಹಿತಿ ನೀಡಲು ಉದ್ದೇಶಿಸಲಾಗಿದೆ.ತಾಂತ್ರಿಕ ಮಾಹಿತಿ, ಯೋಜನೆ ಹಾಗೂ ಸವಲತ್ತುಗಳ ಲಭ್ಯತೆ, ಮಣ್ಣು ಮಾದರಿ ಸಂಗ್ರಹ ಹಾಗೂ ಈಗಾಗಲೇ ವಿಶ್ಲೇಷಣೆಯಾಗಿರುವ ಮಾದರಿಗಳ ಮಣ್ಣು ಆರೋಗ್ಯ ಚೀಟಿಗಳ ವಿತರಣೆ, ಬೆಳೆ ವಿಮೆ, ಕೃಷಿ ಪರಿಕರಗಳ ನಿರ್ವಹಣೆ, ಪಶುಗಳಿಗೆ ಲಸಿಕೆ ಕಾರ್ಯಕ್ರಮ ಮತ್ತು ಪಶು ಚಿಕಿತ್ಸಾ ಶಿಬಿರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆ, ಸಾಲ ಸೌಲಭ್ಯ, ಯಂತ್ರೋಪಕರಣ, ಹನಿ ನೀರಾವರಿ ಮತ್ತು ತುಂತುರು ನೀರಾವರಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಸಾವಯವ ಕೃಷಿ ಮಿಷನ್, ಸಾವಯವ ಗ್ರಾಮ ಯೋಜನೆ,ಕೃಷಿ ಆಧಾರಿತ ಉಪಕಸುಬುಗಳ ಬಗ್ಗೆ ಮಾಹಿತಿ, ಸಂಸ್ಕರಣಾ ಘಟಕಗಳು, ರೈತಕ್ಷೇತ್ರ ಪಾಠಶಾಲೆ, ಭೂಚೇತನ, ಆತ್ಮ ಯೋಜನೆ, ರೈತ ಶಕ್ತಿ ಗುಂಪುಗಳು ಇತ್ಯಾದಿ, ಸಮಗ್ರ ಕೃಷಿ ತಾಂತ್ರಿಕತೆಗಳನ್ನು ಬಿಂಬಿಸುವ ಸಾಕ್ಷ್ಯ ಚಿತ್ರ ಪ್ರದರ್ಶನ, ಜಾನಪದ ಹಾಡುಗಾರರು, ಬೀದಿ ನಾಟಕಗಾರರು, ಯಕ್ಷಗಾನ ಕಲಾವಿದರು, ಒಗಟು,ಲಾವಣಿ, ಗಾದೆ ಹೇಳುವವರ ಮುಖಾಂತರ ಕೃಷಿ ಸಂದೇಶ ಸಾರುವ ಹಾಡು, ಕಿರು ನಾಟಕ ಏರ್ಪಡಿಸಲಾಗುವುದು.ರೈತ ಸಂವಾದ ಕಾರ್ಯ ಕ್ರಮದಡಿ ಕ್ಷೇತ್ರ ಮಟ್ಟದಲ್ಲಿ ತಾಂತ್ರಿ ಕತೆಯನ್ನು ರೈತರು ಅಳವಡಿ ಸುವಾಗ ಎದುರಿಸುವ ಸಮಸ್ಯೆಗಳ ವೈಜ್ಞಾನಿಕ ವಿಶ್ಲೇಷಣೆ, ಪರಿಹಾ ರೋಪಾಯ ಸೂಚಿಸುವ ಮತ್ತು ಅವುಗಳನ್ನು ಅಳವಡಿ ಸುವಂತೆ ಮನವರಿಕೆ ಮಾಡುವುದು. ವಿಜ್ಞಾನಿ, ವಿಷಯ ತಜ್ಞರೊಂದಿಗೆ ರೈತರು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸುವುದು. ಪ್ರಗತಿ ಪರ ರೈತ ರೊಂದಿಗೆ ಅನುಭವ ಹಂಚಲು ಅವಕಾಶ. ವಿಶೇಷ ಪ್ರಯತ್ನ ಗಳಿಂದಾಗಿರುವ ಮಾದರಿ ಹಸಿರು ಹೊಲ, ಹಸಿರು ತೋಟ, ಹಸಿರು ಗದ್ದೆಗಳಿಗೆ ಎಲ್ಲರೊಂದಿಗೆ ಗ್ರಾಮ ನಡಿಗೆ ಮಾಡುವ ಅವಕಾಶವನ್ನು ಈ ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ. ರೈತರಿಗೆ ಸಕಾಲದಲ್ಲಿ ಕೃಷಿ ಪರಿಕರಗಳು/ಸಾಮಗ್ರಿಗಳು,ಸಾಲ ಸೌಲಭ್ಯಗಳನ್ನು ದೊರಕಿಸುವುದು, ಕೃಷಿ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳೂ ರೈತರ ಮನೆ-ಮನಕ್ಕೆ ನೇರವಾಗಿ ತಲುಪುವುದು, ಮಾದರಿ ಪ್ರಯತ್ನಗಳು, ಮಾದರಿ ರೈತರು, ಜ್ಞಾನದ ಹಂಚಿಕೆ, ಆಹಾರ ಬೆಳೆಗಳ ಉತ್ಪಾದಕತೆಯಲ್ಲಿ ಗಮನಾರ್ಹ ಬದಲಾವಣೆ ತರುವುದು, ರೈತ ಸಂಪರ್ಕ ಕೇಂದ್ರಗಳಲ್ಲಿ ಹೊಸ ತಂತ್ರಜ್ಞಾನಕ್ಕೆ ಬೇಕಿರುವ ಬೇಡಿಕೆಗಳನ್ನು ಸಂಗ್ರಹಿಸುವುದು, ಸಾಮಾನ್ಯ ಕೃಷಿ ಅಭಿವೃದ್ಧಿಗೆ ಬೇಕಾದ ಎಲ್ಲ ಕ್ರಮಗಳ ನಿರ್ವಹಣೆಗೆ ನಿರಂತರ ಸಿದ್ಥತೆ ಮಾಡುವುದು ಕೃಷಿ ಮಹೋತ್ಸವದ ಪ್ರತಿಫಲಗಳೆಂದು ಪರಿಗಣಿಸಲ್ಪಟ್ಟಿದೆ.