Tuesday, September 21, 2010

ಜಿಲ್ಲಾ ರಂಗಮಂದಿರ ಕಾಮಗಾರಿ ಆರಂಭಿಸಲು ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು,ಸೆ.21: ದಕ್ಷಿಣ ಕನ್ನಡ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಬೋಂದೆಲ್ ನಲ್ಲಿ 8 ರಿಂದ 9 ಎಕರೆ ಜಮೀನು ಲಭ್ಯವಿದ್ದು, 90x100 ಮೀಟರ್ ಕಟ್ಟಡ ನಿರ್ಮಾಣಕ್ಕೆ, ವಾಹನ ಪಾರ್ಕಿಂಗ್, ಹೂತೋಟ ಸೇರಿದಂತೆ ಸುಸ್ಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಸೂಚನೆ ನೀಡಿದರು.
ಬೋಂದೆಲ್ ನಲ್ಲಿ ವಿಮಾನ ನಿಲ್ದಾಣಕ್ಕೆ ರಸ್ತೆಗೆ ಹೊಂದಿ ಕೊಂಡಂತೆ ರಂಗಮಂದಿರ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಕೆಲವು ವಸತಿ ಗೃಹಗಳನ್ನು ಸ್ಥಳಾಂತರ ಮಾಡಲು ಇಲಾಖೆಯ ಅಧೀಕ್ಷಕ ಇಂಜಿನಿಯರ್ ಬಾಲಕೃಷ್ಣ ಅವರು ಸಮ್ಮತಿಸಿದರು. ಇದೇ ಜಾಗದಲ್ಲಿ ಎನ್ ಸಿಸಿ ಯವರಿಗೂ ನೀಡಲು ಉದ್ದೇಶಿಸಿರುವ ಎರಡು ಎಕರೆ ಜಮೀನನ್ನು ಪಕ್ಕದಲ್ಲೇ ನೀಡಲು ನಿರ್ಧರಿಸಲಾಯಿತು. ಕಳೆದ 25 ವರ್ಷದಿಂದ ರಂಗಮಂದಿರ ನಿರ್ಮಾಣದ ನಿರೀಕ್ಷೆಯಲ್ಲಿದ್ದೇವೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಡಾ. ವಾಮನ ನಂದಾವರ ಹಾಗೂ ಡಾ. ನಾ.ದಾಮೋದರ ಶೆಟ್ಟಿ ಹೇಳಿದರು. ಆದಷ್ಟು ಶೀಘ್ರದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ ಆರಂಭವಾಗ ಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ಎನ್. ಯೋಗೀಶ್ ಭಟ್, ಯು ಟಿ ಖಾದರ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ಡಾ. ಹರೀಶ್ ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ . ನಾಗೇಶ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ವೆಂ. ನಾಯಕ್ ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಮತ್ತಿತರರು ಪಾಲ್ಗೊಂಡಿದ್ದರು.