Wednesday, September 29, 2010

ದ.ಕ.ದಲ್ಲಿ ನಿಷೇದಾಜ್ಞೆ, ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರು,ಸೆ.29: ನಾಳೆ ಅಯೋಧ್ಯಾ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಂದೋಬಸ್ತಿಗಾಗಿ 1,500 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು,ನಿಷೇದಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು. ಇಂದು ಅವರ ಕಚೇರಿಯಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಮಿಷನರ್,ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಗೃಹ ರಕ್ಷಕ ದಳ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು ನಾಗರಿಕ ಪೊಲೀಸರನ್ನು ಬಂದೋಬಸ್ತಿಗಾಗಿ ನಿಯುಕ್ತಿಗೊಳಿಸಲಾಗಿದೆ. ಮಂಗಳೂರಿನ ಪರಿಸ್ಥಿತಿಯನ್ನು ಅರಿತು ಹೆಚ್ಚು ಕೆಎಸ್ಆರ್ ಪಿ ತುಕಡಿಗಳನ್ನು ಸರಕಾರ ಒದಗಿಸಿದೆ. 15 ಪ್ರಹಾರ ದಳಗಳನ್ನು ಕೂಡ ಒದಗಿಸಲಾಗಿದೆ ಎಂದು ತಿಳಿಸಿದರು.

ದೈನಂದಿನ ಪೊಲೀಸ್ ವಾಹನಗಳ ಹೊರತಾಗಿ ಹೆಚ್ಚುವರಿ 20 ಗಸ್ತು ವಾಹನಗಳು ಕರ್ತವ್ಯ ನಿರ್ವಹಿಸಲಿದ್ದು, ನಗರ ವ್ಯಾಪ್ತಿಯಲ್ಲಿ 100 ವಾಹನಗಳು ಬಂದೋ ಬಸ್ತ್ ಕಾರ್ಯದಲ್ಲಿ ನೆರ ವಾಗಲಿವೆ. ಈಗಾಗಲೇ ಪೊಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಿದ್ದು, ಅವರ ಸಲಹೆಗಳನ್ನು ಆಧರಿಸಿ ಬಂದೋಬಸ್ತಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಪೊಲೀಸ್ ಠಾಣಾ ಹಂತ ಹಾಗೂ ಜಿಲ್ಲಾ ಮಟ್ಟಗಳಲ್ಲಿ ನಡೆದ ಶಾಂತಿ ಸಭೆಗಳ ಸಲಹೆಗಳನ್ನು ಪರಿಗಣಿಸಲಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ವಿವರಿಸಿದರು.
ವಿವಿಧ ಧರ್ಮಗಳ ಹಾಗೂ ರಾಜಕೀಯ ನಾಯಕರು ಎರಡು ದಿನಗಳ ಕಾಲ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ನಗರದಲ್ಲಿದ್ದು ಪೊಲೀಸರೊಂದಿಗೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ನುಡಿದರು.ಮಂಗಳೂರಿನಲ್ಲಿ ಶಾಂತಿ ಕಾಪಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಒಂದಾಗಿ ಶಾಂತಿಗೆ ಕರೆ ನೀಡಿರುವುದು ಪೊಲೀಸರ ಕೆಲಸವನ್ನು ಹಗುರವಾಗಿಸಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು. ಈ ಸಂದರ್ಭದಲ್ಲಿ ಯಾವುದೇ ಗಾಳಿ ಸುದ್ದಿಗೆ ಕಿವಿಗೊಡದೆ ಶಾಂತಿ ಕಾಪಾಡಲು ನಾಗರಿಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.ಡಿಸಿಪಿಗಳಾದ ಮುತ್ತುರಾಯ,ಮತ್ತು ಆರ್.ರಮೇಶ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.