Saturday, July 31, 2010

ವಸತಿರಹಿತರಿಗೆ ಬಸವ ಇಂದಿರ ವಸತಿ ಯೋಜನೆ

ಮಂಗಳೂರು,ಜು.31: 2010-11ನೇ ಸಾಲಿನಿಂದ ಕೇಂದ್ರ ಪುರಸ್ಕೃತ ಇಂದಿರಾ ಆವಾಸ್ ಯೋಜನೆಯನ್ನು ಪರಿಷ್ಕರಣೆಗೊಳಿಸಿ ರಾಜ್ಯದಲ್ಲಿರುವ ಎಲ್ಲ ಅರ್ಹ ಗುಡಿಸಲು ವಾಸಿಗಳಿಗೆ ಮತ್ತು ವಸತಿ ರಹಿತರಿಗೆ ಬಸವ ಇಂದಿರಾ ವಸತಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು ಹೇಳಿದರು.
ಈ ಯೋಜನೆಯಡಿ 63500 ಘಟಕ ವೆಚ್ಚ ಇದ್ದು, ಇದರಲ್ಲಿ 35000 ಕೇಂದ್ರದ ಪಾಲು ಹಾಗೂ ಬಾಕಿ ರೂ. 15000 ರೂ.ವನ್ನು ರಾಜ್ಯ ಸರ್ಕಾರದ ಸಹಾಯ ಧನವಿರುತ್ತದೆ. ರೂ. 10,000 ಗಳನ್ನು ಫಲಾನುಭವಿಯ ಬ್ಯಾಂಕುಗಳಿಂದ ಡಿ ಆರ್ ಐ ಯೋಜನೆಯಡಿ ಸಾಲ ಪಡೆಯಬಹುದು.ಹಾಗೂ 3500 ರೂ.ಗಳನ್ನು ಫಲಾನುಭವಿಯ ಸ್ವಂತ ವಂತಿಕೆಯಿಂದ ಭರಿಸಬೇಕು.
ಈ ಯೋಜನೆಯಡಿ ಫಲಾನುಭವಿಗಳ ಗುರಿಯನ್ನು ಈಗಾಗಲೇ ಎಲ್ಲ ಗ್ರಾ.ಪಂಗಳಲ್ಲಿ ಮಾಡಲಾದ ಗುಡಿಸಲು ವಾಸಿಗಳ ಸಮೀಕ್ಷೆಯ ಆಧಾರದಲ್ಲಿ ನಿಗದಿಪಡಿಸಿ ರಾಜೀವ್ ಗಾಂಧಿ ಗ್ರಾಮೀಣ ವಸಿ ನಿಗಮ ಎಲ್ಲ ತಾಲೂಕುಗಳಿಗೆ ಹಂಚಿಕೆ ಮಾಡಿದೆ. ದ.ಕ ಜಿಲ್ಲೆಗೆ ಮೊದಲ ಹಂತದಲ್ಲಿ ಮಂಗಳೂರು-54, ಪುತ್ತೂರು-185 ಹಾಗೂ ಸುಳ್ಯ -54 ಒಟ್ಟು 293 ಮನೆಗಳ ಗುರಿ ನೀಡಲಾಗಿದೆ ಎಂದು ಸಿಇಒ ವಿವರಿಸಿದರು. ಮುಂದಿನ ಹಂತಗಳಲ್ಲಿ ಜಿಲ್ಲೆಗೆ ಇನ್ನೂ ಹೆಚ್ಚಿನ ಗುರಿಯನ್ನು ನಿರೀಕ್ಷಿಸಲಾಗಿದೆ ಎಂದು ಮೀಟ್ ದ ಪ್ರೆಸ್ ಕಾರ್ಯಕ್ರಮದಲ್ಲಿ ತಿಳಿಸಿದರು.