Friday, July 16, 2010

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22,600 ಕೋಟಿ ಬ್ಯಾಂಕಿಂಗ್ ವ್ಯವಹಾರ

ಮಂಗಳೂರು,ಜು.16:ದಕ್ಷಿಣ ಕನ್ನಡ ಜಿಲ್ಲೆಯ 415 ಬ್ಯಾಂಕ್ ಶಾಖೆಗಳಲ್ಲಿ 14,407 ಕೋಟಿ ರೂ.ಠೇವಣಿ ಹಾಗೂ 8194 ಮುಂಗಡ ಕೋಟಿ ರೂ. ಮುಂಗಡ ಸೇರಿದ್ದು ಒಟ್ಟು 22,601ಕೋಟಿ ರೂ. ವ್ಯವಹಾರ ನಡೆಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ಮುಖ್ಯ ಪ್ರಬಂಧಕ ಎಮ್ ರವಿ ತಿಳಿಸಿದರು.

ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ಯಾಂಕಿಂಗ್ ಅಭಿವೃದ್ಧಿ ಮತ್ತು ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾ ಸಾಲ ಯೋಜನೆ 2009-10ರಡಿಯಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ 3016 ಕೋಟಿ ರೂ., ನಿಗದಿಯಾಗಿದ್ದು 2850 ಕೋಟಿ ರೂ.ಗಳ ಸಾಲ ಬಿಡುಗಡೆಯಾಗಿದೆ. ಶೇಕಡಾ 94 ರಸಾಧನೆಯಾಗಿದೆ. ಆದ್ಯತಾ ವಲಯದ ಕೃಷಿ ಸಾಲ ಯೋಜನೆಯಡಿ 2210 ಕೋಟಿ ರೂ. ನಿಗದಿಯಾಗಿದ್ದು, 2011 ಕೋಟಿ ರೂ.ಗಳನ್ನು ವಿತರಿಸಿ ಶೇಕಡ 91 ಗುರಿ ಸಾಧಿಸಲಾಗಿದೆ. ಕೃಷಿಗಾಗಿ 1160 ಕೋಟಿ, ಸಣ್ಣ ಕೈಗಾರಿಕೆಗೆ 268 ಕೋಟಿ, ಮತ್ತಿತರ ಆದ್ಯತಾ ವಲಯಕ್ಕೆ 584 ಕೋಟಿ ಸಾಲ ನೀಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬ್ಯಾಂಕ್ ಗಳು 66938 ಕಾರ್ಡಗಳನ್ನು ವಿತರಿಸಿದ್ದು, ಕೃಷಿಕರಿಗೆ 1765 ಕೋಟಿ, ಮಹಿಳೆಯರಿಗೆ 987 ಕೋಟಿ, ದುರ್ಬಲ ವರ್ಗದವರಿಗೆ 998 ಕೋಟಿ, ಅಲ್ಪಸಂಖ್ಯಾತರಿಗೆ ನೀಡಿದ ಸಾಲ ಆದ್ಯತಾ ರಂಗದ ಸಾಲ 26 ಶೇಕಡ ಆಗಿದ್ದು, ಸರ್ಕಾರ ನಿಗದಿ ಪಡಿಸಿದ ಮಿತಿ 15% ಕ್ಕಿಂತ ಹೆಚ್ಚಾಗಿದೆ. ಸ್ತ್ರೀಶಕ್ತಿ ಕಾರ್ಯಕ್ರಮದಡಿಯಲ್ಲಿ 3,638 ಸ್ವಸಹಾಯ ಸಂಘಗಳಿದ್ದು, ಈ ವರ್ಷ 38 ಗುಂಪುಗಳಿಗೆ ಸಾಲ ಬಿಡುಗಡೆ ಮಾಡಲಾಗಿದೆ. ಒಟ್ಟು 45,166 ಸ್ವಸಹಾಯ ಸಂಘಗಳು ಬ್ಯಾಂಕ್ ಗಳಿಂದ ಸಾಲ ಪಡೆದಿವೆ. ಇವುಗಳಿಗೆ 387 ಕೋಟಿ ರೂ. ಸಾಲ ಬಿಡುಗಡೆಯಾಗಿದೆ.
ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು ಈ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 120 ಫಲಾನುಭವಿಗಳಲ್ಲಿ 125 ಮಂದಿಗೆ ಸಾಲ ಮಂಜೂರಾತಿ ದೊರಕಿದೆ. ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯಲ್ಲಿ ಬದಲಾವಣೆಯನ್ನು ತಂದಿದ್ದು, ಸ್ವ ಉದ್ಯೋಗಕ್ಕಾಗಿ 2 ಲಕ್ಷ ರೂ.ವರೆಗೆ ಸಾಲ ದೊರೆಯಲಿದೆ. ಶೇ. 25 ಅಥವಾ ಗರಿಷ್ಠ 50,000 ರೂ. ಸಹಾಯಧನ ಸಿಗಲಿದೆ. ನಗರ ಪ್ರದೇಶದಲ್ಲಿ ಮಹಿಳಾ ಗುಂಪುಗಳಿಗೆ ಯೋಜನಾ ವೆಚ್ಚ ಶೇ. 35 ಅಥವಾ ಪ್ರತಿ ಸದಸ್ಯರಿಗೆ ಗರಿಷ್ಠ 60,000 ರೂ. ಸಹಾಯಧನ ಲಭ್ಯವಿದೆ. ಈ ಯೋಜನೆಯಲ್ಲಿ 77 ಫಲಾನುಭವಿಗಳಿಗೆ ಹಾಗೂ 18 ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗಿದೆ.
ಬಡ್ಡಿ ಸಹಾಯಧನ ಯೋಜನೆಯಲ್ಲಿ ರಾಜ್ಯ ಸರ್ಕಾರ ನಮ್ಮ ಮನೆ ಯೋಜನೆ ರೂಪಿಸಿದ್ದು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಕಡಿಮೆ ಆದಾಯದವರಿಗೆ ಒಂದು ಲಕ್ಷ ರೂ., ವರೆಗೆ ಮನೆ ನಿರ್ಮಾಣಕ್ಕೆ ಬಡ್ಡಿಯಲ್ಲಿ ರಿಯಾಯಿತಿ ನೀಡಿ ಮಾಸಿಕ 600 ರೂ., ಇಎಂಐಯಲ್ಲಿ ಸಾಲ ಮರುಪಾವತಿ ಯೋಜನೆ ಜಾರಿಯಲ್ಲಿದೆ. ದ.ಕ. ಜಿಲ್ಲೆಗೆ 6800 ಗುರಿ ನಿಗದಿಯಾಗಿದ್ದು, 329 ಅರ್ಜಿಗಳನ್ನು ಬ್ಯಾಂಕ್ ಗಳಿಗೆ ಸಾಲ ಮಂಜೂರಾತಿಗೆ ಕಳುಹಿಸಿಕೊಡಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಉದಯ ಕುಮಾರ್ ಹೊಳ್ಳ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 2000ಕ್ಕಿಂತ ಮೇಲ್ಪಟ್ಟು ಜನಸಂಖ್ಯೆ ಇರುವ 214 ಗ್ರಾಮಗಳನ್ನು ಬಿಸಿನೆಸ್ ಕರೆಸ್ಪಾಂಡನ್ಸ್ ಮಾದರಿಯಲ್ಲಿ ಒಳಪಡಿಸಲು ಬಾಕಿ ಇದ್ದು, 2011 ಮಾರ್ಚ್ 31ರೊಳಗೆ ಇದನ್ನು ಸಾಧಿಸುವ ಗುರಿ ಹೊಂದಲಾಗಿದೆ ಎಂದರು. ಪ್ರತಿಯೊಂದು ಕುಟುಂಬವೂ ಬ್ಯಾಂಕಿಂಗ್ ಖಾತೆ ಹೊಂದಲು ಹಾಗೂ ಬ್ಯಾಂಕಿಂಗ್ ಸಾಲ ಸೌಲಭ್ಯ ಪಡೆಯಲು ಗುರಿ ನಿಗದಿಪಡಿಸಿ ಸಾಧಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದರು. ನಬಾರ್ಡ್ ನ ಎಜಿಎಂ ಪ್ರಸಾದ್ ರಾವ್, ಆರ್ ಬಿ ಐ ಪ್ರಬಂಧಕ ಪಿ.ಡಿ ರವಿಕುಮಾರ್ ಉಪಸ್ಥಿತರಿದ್ದರು.