Monday, July 26, 2010

ಅನಧಿಕೃತ ಲಾರಿಗಳಿಗೆ ಮರಳು ನೀಡಿದಲ್ಲಿ ಪರವಾನಗಿ ರದ್ದು- ಜಿಲ್ಲಾಧಿಕಾರಿ ಎಚ್ಚರಿಕೆ

ಮಂಗಳೂರು,ಜುಲೈ26: ಜಿಪಿಎಸ್ ಅಳವಡಿಸಿದ ಲಾರಿಗಳನ್ನು ಹೊರತುಪಡಿಸಿ ಇತರ ಲಾರಿಗಳಿಗೆ ಮರಳು ನೀಡಿದಲ್ಲಿ ಅಂತಹ ಮರಳೆತ್ತುವ ಗುತ್ತಿಗೆದಾರರ ಪರವಾನಗಿಯನ್ನು ತಕ್ಷಣ ರದ್ದುಪಡಿಸುವುದಾಗಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಎಚ್ಚರಿಸಿದ್ದಾರೆ.ಅವರು ಸೋಮವಾರ ಮರಳು ಗುತ್ತಿಗೆದಾರರು, ಹೊಯ್ಗೆ ದೋಣಿ ಮಾಲಕರು, ಕಾರ್ಮಿಕರು ಮತ್ತು ಕಟ್ಟಡ ಸಾಮಗ್ರಿಗಳ ಸಾಗಾಟ ಲಾರಿ ಮಾಲಕರ ಜಂಟಿ ಕ್ರಿಯಾಸಮಿತಿಯ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಮರಳೆತ್ತಲು ಗುತ್ತಿಗೆ ಪಡೆದವರು ಕಡ್ಡಾಯವಾಗಿ ಅಧಿಕೃತ ಲಾರಿಗಳಿಗೆ ಮಾತ್ರ ಮರಳು ನೀಡಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ ಮುಂದೆ ಅಂಥವರು ಮರಳೆತ್ತುವ ಗುತ್ತಿಗೆ ಪಡೆಯುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.ಜಿಪಿಎಸ್ ಅಳವಡಿಸದ, ಬಾನೆಟ್ಗೆ ಪ್ರತ್ಯೇಕ ಬಣ್ಣ ಹಚ್ಚದ ಲಾರಿಗಳು ಮರಳು ಸಾಗಿಸಿದರೆ ಅಂಥ ಲಾರಿಗಳ ಮೇಲೆ ಯಾವುದೇ ಕ್ರಮ ಜರಗಿಸುವುದಿಲ್ಲ. ಆದರೆ ಅವುಗಳಿಗೆ ಮರಳು ಸಿಗದಂತೆ ಮಾಡುವುದು ಖಚಿತ ಎಂದು ಅವರು ಹೇಳಿದರು.
ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ಟಾಸ್ಕ್ಫೋ ಫೋರ್ಸ್ ನ ಒಳಗೆ ಪ್ರತ್ಯೇಕ ತಂಡವನ್ನು ರಚಿಸಲಾಗುವುದು. ಮಂಗಳೂರು ಸಹಾಯಕ ಕಮಿಷನರ್ ಮರಳು ಸಾಗಾಟ ಸಂಬಂಧಿಸಿದ ವಿಷಯಗಳಿಗೆ ನೋಡೆಲ್ ಅಧಿಕಾರಿಯಾಗಿರುತ್ತಾರೆ ಎಂದರು.ಜಿಲ್ಲೆಯ ಗಡಿಗಳ ತಪಾಸಣಾ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದೆ ಎಂದು ನುಡಿದ ಜಿಲ್ಲಾಧಿಕಾರಿಯವರು, ಕೇರಳಕ್ಕೆ ಅಕ್ರಮ ಸಾಗಾಟ, ಅಲ್ಲಲ್ಲಿ ಅಕ್ರಮ ದಾಸ್ತಾನು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಪಿಎಸ್ ಅಳವಡಿಕೆ ಮತ್ತು ಮರಳು ಸಾಗಾಟ ಲಾರಿಗಳಿಗೆ ಪ್ರತ್ಯೇಕ ಬಣ್ಣ ಹಚ್ಚುವ ಕ್ರಮಕ್ಕೆ ಮುಂದಾಗಿರುವುದಾಗಿ ನುಡಿದರು.ಮುಂದಿನ 15 ದಿನಗಳೊಳಗಾಗಿ ಮರಳು ಸಾಗಾಟ ಕುರಿತು ನಿಯಮಾವಳಿಗಳನ್ನು ರೂಪಿಸಿ ಪ್ರಕಟಿಸಲಾಗುವುದು ಎಂದು ಹೇಳಿದ ಜಿಲ್ಲಾಧಿಕಾರಿಯವರು, ವಾಹನಗಳಿಗೆ ಜಿಪಿಎಸ್ ಅಳವಡಿಸುವ ಕುರಿತಂತೆ ಸರಕಾರದ ಮಟ್ಟದಲ್ಲಿಯೂ ಚಿಂತನೆ ನಡೆದಿದೆ ಎಂದರು.
ಅಪರ ಜಿಲ್ಲಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಉಪಸ್ಥಿತರಿದ್ದರು.