Tuesday, July 27, 2010

'ಜನಸಂಖ್ಯೆ ಸಮಸ್ಯೆಯಾಗದೆ ಸಂಪನ್ಮೂಲವಾಗಲಿ'

ಮಂಗಳೂರು,ಜು.27: ಮಾನವ ಸಂಪನ್ಮೂಲವನ್ನು ಜವಾಬ್ದಾರಿಯಿಂದ ಬಳಸಿಕೊಳ್ಳುವುದರಿಂದ ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳನ್ನು ನಿವಾರಿಸಬಹುದು ಎಂದು ಎಸ್ ಡಿ ಎಮ್ ಕಾಲೇಜಿನ ಬಿಸಿನೆಸ್ ಮ್ಯಾನೇಜ್ ಮೆಂಟ್ ವಿಭಾಗದ ಪ್ರಾಂಶುಪಾಲರಾದ ಡಾ. ದೇವರಾಜ್ ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಎಸ್ ಡಿ ಎಮ್ ಕಾಲೇಜಿನ ಬಿಸಿನೆಸ್ ಮ್ಯಾನೇಜ್ ಮೆಂಟ್ ನ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಪಂಚಲ್ಲಿ 600 ಕೋಟಿಯಷ್ಟು ಜನಸಂಖ್ಯೆಯಿದ್ದು,ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಅಧಿಕವಾಗಿದೆ. ಈ ಬಗ್ಗೆ ನಮ್ಮಲ್ಲಿ ಬಹಳಷ್ಟು ಜಾಗೃತಿ ಮೂಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ರಕ್ತದಾನದ ಬಗ್ಗೆ ಎನ್ ಎಸ್ ಎಸ್ ಘಟಕ ಅಗತ್ಯ ಜಾಗೃತಿಯನ್ನು ಜನರಲ್ಲಿ ಮೂಡಿಸಿದ್ದು ಮಾನವ ರಕ್ತಕ್ಕೆ ಪರ್ಯಾಯವಿಲ್ಲ. ಹಾಗಾಗಿ ಬದುಕ ನೀಡುವ ರಕ್ತದಾನ ಸರ್ವಶ್ರೇಷ್ಠ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಆರ್ ಸಿ ಎಚ್ ಡಾಕ್ಟರ್ ರುಕ್ಮಿಣಿ ಅವರು ಮಾತನಾಡಿ,ದೇಶದ ಸಂಪನ್ಮೂಲ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗುವಂತೆ ಜನಸಂಖ್ಯಾ ಸ್ಥಿರತೆ ಸಾಧಿಸುವುದು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು. ನಮ್ಮ ಜಿಲ್ಲೆಯ ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ದಾಖಲಿಸಿದೆ ಎಂದರು.ಎಲ್ಲದರಲ್ಲೂ ಗುಣಮಟ್ಟ ಕಾಯ್ದುಕೊಳ್ಳುವಿಕೆ ಇಂದಿನ ಅಗತ್ಯ ಎಂದು ತನ್ನ ಉಪನ್ಯಾಸದಲ್ಲಿ ಅವರು ವಿವರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಕಿಶೋರ್ ರಕ್ತದಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು.ಗೌರಿಶೆಣೈ,ಯೋಜನಾಧಿಕಾರಿ ತ್ರಿಶಾಂತ್ ಉಪಸ್ಥಿತರಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಜಯರಾಂ ಉಪಸ್ಥಿತರಿದ್ದರು. ನಗರದ ವಿವಿಧ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ನ 50 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.