Wednesday, April 4, 2012

ದ.ಕ.ಜಿ.ಪಂ. ಗೆ 'ಪಿಯಸ್' ಪ್ರಶಸ್ತಿ ಗರಿ

ಮಂಗಳೂರು,ಏಪ್ರಿಲ್.04: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಕೇಂದ್ರ ಸರ್ಕಾರದ ಮತ್ತೊಂದು ಪ್ರಶಸ್ತಿಯ ಗರಿ ಲಭಿಸಿದೆ. ಭಾರತ ಸರ್ಕಾರದ ಗ್ರಾಮೀಣಭಿವೃದ್ಧಿ ಮಂತ್ರಾಲಯ
ಪಂಚಾಯತ್ ಗಳ ಸಬಲೀಕರಣ ಮತ್ತು ಉತ್ತರದಾಯಿತ್ವಕ್ಕಾಗಿ ಪ್ರೋತ್ಸಾಹ ಕೊಡುವ ಯೋಜನೆಗಾಗಿ ಕೊಡಮಾಡುವ 2010-11 ರ ಸಾಲಿನ ಪಿಯಾಸ್ ಪ್ರಶಸ್ತಿ ಜಿಲ್ಲೆಗೆ ಲಭಿಸಿದೆ ಎಂದು ದ.ಕ.ಜಿಲ್ಲಾ ಪಂಚಾಯತ್ ಸಿಇಒ ಡಾ. ವಿಜಯ ಪ್ರಕಾಶ್ ಅವರು ತಿಳಿಸಿದ್ದಾರೆ.25 ಲಕ್ಷ ರೂಪಾಯಿಗಳ ಮೊತ್ತ ಹೊಂದಿರುವ ಪ್ರಶಸ್ತಿ ಇದಾಗಿದ್ದು, ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಾಗಿದೆ.
ಜಿಲ್ಲೆಯಲ್ಲಿನ ಪ್ರಗತಿಯ ನೈಜತೆ ತಿಳಿಯಲು ರಾಜ್ಯದ ಮೈರಾಡ ಮತ್ತು ಕೇಂದ್ರದ ಸ್ಟಾಕ್ ತಂಡಗಳು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯ ವೈಖರಿ , ಅಭಿವೃದ್ಧಿ ಕಾರ್ಯಗಳ ಅನುಷ್ಟಾನ, ಸಾಮಾಜಿಕ ಲೆಕ್ಕ ಪರಿಶೋಧನೆ, ಮತ್ತು ಇತರ ಗುಣಾತ್ಮಕ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಸಿಇಒ ಅವರು ಮಾಹಿತಿ ನೀಡಿದ್ದಾರೆ.