Monday, September 23, 2013

ಜಿಲ್ಲೆಯಲ್ಲಿ ಸಾಹಸ ಜಲಕ್ರೀಡೆಗೆ ಪ್ರೋತ್ಸಾಹ: ಸಚಿವ ಅಭಯಚಂದ್ರ ಜೈನ್

ಮಂಗಳೂರು, ಸೆಪ್ಟೆಂಬರ್ 23:- ತಣ್ಣೀರು ಬಾವಿಯಲ್ಲಿ ಸಾಹಸ ಜಲಕ್ರೀಡೆ ಆರಂಭಿಸುವ ಬಗ್ಗೆ ಯುವ ಜನ ಸೇವಾ ಮತ್ತು ಮೀನುಗಾರಿಕೆ ಸಚಿವರಾದ  ಅಭಯಚಂದ್ರ ಜೈನ್ ಅವರು ಇಂದು ಸ್ಥಳ ಪರಿಶೀಲನೆ ನಡೆಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಯುವಜನಸೇವೆ ಇಲಾಖಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕ್ರೀಡಾಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲು ಇಲಾಖೆ ಬದ್ಧವಾಗಿದೆ ಎಂದರು.  ತಾಲೂಕು ಮಟ್ಟದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಹಾಗೂ ಕ್ರೀಡಾ ತರಬೇತಿಗೆ ಪೂರಕ ವಾತಾವರಣವಿದ್ದು, ಅಗತ್ಯ ಸೌಲಭ್ಯಗಳನ್ನು ಕ್ರೀಡಾಪಟುಗಳಿಗೆ ಒದಗಿಸಲಾಗುವುದು. ಮಂಗಳಾ ಕ್ರೀಡಾಂಗಣವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿರುವ ಕ್ರೀಡಾಶಾಲೆಯಲ್ಲಿ ಮಕ್ಕಳ ಕೊರತೆಯಿದ್ದು, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಎಲ್ಲ ತಾಲೂಕುಗಳ ಅಗತ್ಯಗಳನ್ನು ಪರಿಶೀಲಿಸಿ, ಇಲಾಖೆಯ ಕಾರ್ಯಕ್ರಮಗಳ ಸಮಗ್ರ ವಿವರ ಪಡೆದರಲ್ಲದೆ ಅನುಷ್ಠಾನಕ್ಕೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಶಾಸಕರಾದ  ಜೆ ಆರ್ ಲೋಬೋ,  ಮೊಹಿಯುದ್ದಿನ್ ಬಾವಾ, ಜಿಲ್ಲಾಧಿಕಾರಿ  ಎನ್ ಪ್ರಕಾಶ್, ಇಲಾಖೆಯ ನಿರ್ದೇಶಕರಾದ ಐಪಿಎಸ್ ವಿಕಾಸ್ ಕುಮಾರ್ ವಿಕಾಸ್, ಜಂಟಿ ನಿರ್ದೇಶಕರಾದ ಎಂ ಎಸ್ ರಮೇಶ್, ಡಾ ಜಿತೇಂದ್ರ ಶೆಟ್ಟಿ ಉಪಸ್ಥಿತರಿದ್ದರು.