Monday, September 23, 2013

ಸಾಮಾಜಿಕ ನ್ಯಾಯ ಸರ್ಕಾರದ ಸಂಕಲ್ಪ: ನಿರ್ದೇಶಕರು ಟ್ರೈಬಲ್ ವೆಲ್ಫೆರ್

ಮಂಗಳೂರು, ಸೆಪ್ಟೆಂಬರ್ 23:-ರಾಜ್ಯ ಸರ್ಕಾರ ರಾಜ್ಯದ ಪರಿಶಿಷ್ಟ ವರ್ಗದ ಜನತೆಯ ಕಲ್ಯಾಣಕ್ಕಾಗಿ 2,480 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಕಾದಿರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಮತ್ತು ಮಲೆಕುಡಿಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರಾದ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು. ಅವರಿಂದು ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಕಚೇರಿಗೆ ಭೇಟಿ ನೀಡಿ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಜಿಲ್ಲೆಯ ಕೊರಗರ ಹಾಗೂ ಮಲೆಕುಡಿಯರ ಪರಿಸ್ಥಿತಿಯ ಅರಿವು ಈಗಾಗಲೇ ಇದ್ದು, ಇವರ ಶಿಕ್ಷಣ, ಆರೋಗ್ಯ, ವಸತಿ, ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನಿರ್ದೇಶಕರು ಹೇಳಿದರು.
ಈಗಾಗಲೇ ಚಾಮರಾಜನಗರದ ಬಿ ಆರ ಹಿಲ್ಸ್ ನ ಸೋಲಿಗರ ಹಾಡಿ,  ಬೈಲುಕುಪ್ಪೆಯ ಡೊಂಗ್ರಗರೇಷಿಯಾ ಸಮುದಾಯದವರು, ಜೇನುಕುರುಬರನ್ನು ಹಾಗೂ ಕೆಲವು ಆಶ್ರಮ ವಸತಿ ಶಾಲೆಗಳನ್ನು ಭೇಟಿ ನೀಡಿದ್ದು, ಇವರಿಗಾಗಿ ಸರ್ಕಾರ ನೀಡಿರುವ ಎಲ್ಲ ಯೋಜನೆಗಳ ಫಲವನ್ನು ಈ ಸಮುದಾಯಕ್ಕೆ ತಲುಪಿಸಲು ಕ್ರಮಕೈಗೊಳ್ಳುವುದಾಗಿ ನಿರ್ದೇಶಕರು ಹೇಳಿದರು.
ಈ ಸಂಬಂಧ ರಾಜ್ಯಮಟ್ಟದಲ್ಲಿ 25ರಂದು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗಗಳಡಿ 82,000 ಜನಸಂಖ್ಯೆಯಿದ್ದು, ಇವರಲ್ಲಿ 4,858 ಕೊರಗರು ಹಾಗೂ 7,684 ಮಲೆಕುಡಿಯರಿದ್ದಾರೆ ಎಂಬ ಅಂಕಿಅಂಶಗಳು ಲಬ್ಯವಿದೆ. ಇವರಿಗೆ ವಿವಿಧ ಯೋಜನೆಗಳಡಿ ವಸತಿ ಹಾಗೂ ನಿರ್ಮಲ ಭಾರತ ಅಭಿಯಾನದಡಿ ಶೌಚಾಲಯ ನಿಮರ್ಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ನಿರ್ದೇಶಕರು ಹೇಳಿದರು.
ಸಭೆಯಲ್ಲಿ ಐಟಿಡಿಪಿ ಅಧಿಕಾರಿ ಸಾಬಿರ್ ಅಹಮದ್ ಮುಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಉಪಸ್ಥಿತರಿದ್ದು, ಅಹವಾಲು ಹಾಗೂ ಸಲಹೆಗಳನ್ನು ನೀಡಿದರು.