Thursday, September 5, 2013

ಶಿಕ್ಷಣವೇ ನಮ್ಮ ಯಶಸ್ಸು ಗಳಿಸುವ ಸಾಧನ

ಮಂಗಳೂರು,ಸೆಪ್ಟೆಂಬರ್.05:- ಶಿಕ್ಷಕರಿಲ್ಲದ್ದಿದ್ದರೆ ನಾವಿಲ್ಲ.ಶಿಕ್ಷಣವೇ ನಮ್ಮ ಯಶಸ್ಸು ಗಳಿಸುವ ಸಾಧನ. ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರ ಹಾಗೂ ಜವಾಬ್ದಾರಿಯುತ ಕ್ಷೇತ್ರವಾಗಿದೆ. ನಮ್ಮ ಜ್ಞಾನವನ್ನು ಬೆಳಗಿಸಲು ಹಾಗೂ ಜೀವನ ರೂಪಿಸಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನೋತ್ಸವ ಹಾಗೂ ಶಿಕ್ಷಕ ದಿನಾಚರಣೆಯನ್ನು  ಆಚರಿಸುವುದು ಶ್ಲಾಘನೀಯ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೋ ಅಭಿಪ್ರಾಯಪಟ್ಟರು.
      ಇಂದು ಕರ್ನಾಟಕ ಸರ್ಕಾರದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಉತ್ತರವಲಯ ಶಿಕ್ಷಕ ದಿನಾಚರಣೆ ಸಮಿತಿ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ  ಮಂಗಳೂರು ಪುರಭವನದಲ್ಲಿ ಏರ್ಪಡಿಸಿದ ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
 ಶಿಕ್ಷಣ ಈಗ ವ್ಯಾಪಾರೀಕರಣಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಅಂಕ ಪಡೆಯುವ ಗುರಿಯೇ ಮುಖ್ಯವಾಗಿದೆ. ಸಾಮಾನ್ಯ ಜ್ಞಾನ ಯಾರಿಗೂ ಬೇಡವಾಗಿದೆ. ಜೀವನದ ಮೌಲ್ಯವನ್ನು ರೂಪಿಸುವಲ್ಲಿ ಹಾಗೂ ಸಮಜ ಪರಿವರ್ತನೆ ಕುರಿತು ವಿದ್ಯಾರ್ಥಿಗಳಿಗೆ  ಶಿಕ್ಷಕರು ಅರಿವು ಮೂಡಿಸಬೇಕು ಎಂದರು. ಯಾವುದೇ ಶಿಕ್ಷಣ ಸಂಸ್ಥೆಗಳ ಜಾಗದ ತಕರಾರು ಅಥವಾ ಆರ್ಟಿಸಿ ತಕರಾರು ಏನಾದರೂ ಇದ್ದಲ್ಲಿ 3 ತಿಂಗಳ ಆಂದೋಲನವನ್ನು ಮಂಗಳೂರು ತಾಲೂಕು ತಹಶೀಲ್ದಾರರು ಏರ್ಪಡಿಸಿರುತ್ತಾರೆ. ಸಂಬಂಧಪಟ್ಟ  ಶಾಲೆಗಳ ಮುಖ್ಯಸ್ಥರು ಪರಿಹಾರವನ್ನು ಕಂಡುಕೊಳ್ಳಬಹುದು.
ಸಮಾರಂಭವನ್ನು ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ ಉದ್ಘಾಟಿಸಿ ಉತ್ತಮ ಶಿಕ್ಷಕರಿದ್ದರೆ ಮಾತ್ರ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಶಾಲೆಗಳ 65 ನಿವೃತ್ತ ಶಿಕ್ಷಕರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಅನಿಸಿಕೆಗಳನ್ನು ಆಲಿಸಲಾಯಿತು.
ಸಮಾರಂಭದಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ರಿತೇಶ್ ಶೆಟ್ಟಿ,ಮಂಗಳೂರು ತಾಲೂಕು ಪಂಚಾಯತ್ ಸದಸ್ಯರಾದ ಹರೀಶ್ ಕುಮಾರ್, ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾತಿಮ್ಮಪ್ಪ, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಲರಾದ ಶ್ರೀಮತಿ ಫಿಲೋಮಿನಾ ಲೋಬೋ,  ಎಂ.ಬಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲರಾದ  ದುರ್ಗಾಪರಮೇಶ್ವರಿ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್. ಸಿ. ಮಂಗಳೂರು ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರೋಹಿದಾಸ್ ಉಪಸ್ಥಿತರಿದ್ದರು.