Friday, November 13, 2009

ಆಹಾರ ಧಾನ್ಯ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ:ಕೃಷಿಕರಿಗೆ ನೆರವು

ಮಂಗಳೂರು,ನ.13:ಹೆಚ್ಚುತ್ತಿರುವ ಜನಸಂಖ್ಯೆಯನ್ನಾಧರಿಸಿ ಸಾಕಷ್ಟು ಆಹಾರೋತ್ಪನ್ನಗಳ ಪೂರೈಕೆಗಾಗಿ ರಾಜ್ಯ ಸರ್ಕಾರ ಶೇ.4.5 ರಷ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿದ್ದು,ಗುರಿ ಸಾಧನೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಬೆಳೆಯ ಪ್ರದೇಶವನ್ನು ಹೆಚ್ಚಿಸುವುದು ಅಸಾಧ್ಯವಾದ್ದರಿಂದ ಹೆಚ್ಚು ಇಳುವರಿ ನೀಡುವ ಬೆಳೆಯ ಬಗ್ಗೆ ಇದಕ್ಕೆ ಪೂರಕವಾಗಿ ಕೃಷಿಕರಿಗೆ ಮಾಹಿತಿ,ಸಬ್ಸಿಡಿ ನೀಡುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಬಳಿಗೆ ಒಂದರಂತೆ ಒಟ್ಟು 17 ರೈತ ಸಂಪರ್ಕ ಕೇಂದ್ರಗಳಿವೆ. ತಾಲೂಕು ಮಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ತರಬೇತಿಯನ್ನು ಬೆಳ್ತಂಗಡಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನೀಡಲಾಗುತ್ತಿದೆ. ಮಂಗಳೂರಿನಲ್ಲಿ ರೈತರ ಮಣ್ಣು ಪರೀಕ್ಷಿಸಲು ಮಣ್ಣು ಅರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಬೆಳ್ತಂಗಡಿಯಲ್ಲಿ ರಸಗೊಬ್ಬರ ಮಾದರಿ ವಿಶ್ಲೇಷಣೆಗೆ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದೆ.
ಜಿಲ್ಲೆಯಲ್ಲಿ 2009-10ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಭತ್ತ 35,000 ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತದೆ. ಹಿಂಗಾರು ಹಂಗಾಮಿಗೆ 24000 ಹೆ. ಬೇಸಿಗೆಯಲ್ಲಿ 2500 ಹೆಕ್ಟೇರ್ ಸೇರಿದಂತೆ ಒಟ್ಟು 61500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗುತ್ತದೆ.ಹಿಂಗಾರು ಹಂಗಾಮಿನಲ್ಲಿ ಉದ್ದು 1500 ಹೆಕ್ಟೇರ್,ಹೆಸರು,ಅಲಸಂಡೆ ಮತ್ತು ಹುರುಳಿ 200 ಹೆಕ್ಟೇರ್ ನಂತೆ ಒಟ್ಟು 26,100 ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆಯಲಾಗು ತ್ತದೆ.ಬೇಸಿಗೆಯಲ್ಲಿ ಉದ್ದು 1505ಹೆ.,ಹೆಸರು 900,ಅಲಸಂಡೆ 700,ಎಳ್ಳು 710,ಕಬ್ಬು 30 ಎಕರೆ ವ್ಯಾಪ್ತಿಯಲ್ಲಿ ಒಟ್ಟು 6345 ಹೆಕ್ಟೇರ್ ನಲ್ಲಿ ಬೆಳೆಯಲಾಗುತ್ತದೆ.
ಹಿಂಗಾರು ಬೇಸಿಗೆ ಹಂಗಾಮಿಗೆ ತುಂತುರು ನೀರಾವರಿ ಮುಂತಾದ ನೀರಾವರಿ ವ್ಯವಸ್ಥೆ ಅಳವಡಿಕೆ ಮೂಲಕ ದ್ವಿದಳ ಧಾನ್ಯ/ಎಣ್ಣೆಕಾಳು ಬೆಳೆಗಳ ವಿಸ್ತೀರ್ಣ,ಉತ್ಪಾದನೆ ಹೆಚ್ಚಿಸಲಾಗುವುದು. ಕೇಂದ್ರದಿಂದ ಶೇ.40 ಮತ್ತು ರಾಜ್ಯ ವಲಯದಿಂದ ಶೇ.35ರಂತೆ ಒಟ್ಟು ಶೇ.75ರ ರಿಯಾಯಿತಿಯಲ್ಲಿ ಸವಲತ್ತು ಒದಗಿಸಲಾಗುವುದು. ರೈತರಿಗೆ ಉತ್ತಮ ಗುಣಮಟ್ಟದ ಬೀಜ,ಸಾವಯವ ಕೃಷಿ ಪರಿಕರ, ರಸಗೊಬ್ಬರ, ಸಸ್ಯಸಂರಕ್ಷಣಾ ಔಷಧಿ ಉಪಕರಣ ಪೂರೈಸಲಾಗುವುದಲ್ಲದೆ, ಮಣ್ಣಿನ ಫಲವತತ್ತೆಗೆ ಆದ್ಯತೆ ನೀಡಲಾಗುವುದು. ಆತ್ಮ ಯೋಜನೆಯನ್ನು ಕೃಷಿಗೆ ಸಂಬಂಧಿಸಿದ ಇಲಾಖೆಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುವುದು.
ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಶೇ. 33 ಮಹಿಳಾ ರೈತರಿಗೆ ಆದ್ಯತೆ. ಶೇ.22ರಷ್ಟು ಪ.ಜಾತಿ ಮತ್ತು ಪಂಗಡ ರೈತರಿಗೆ ಮೀಸಲು. ಶೇ.10ರಿಂದ 15ರಷ್ಟು ಅಲ್ಪಸಂಖ್ಯಾತ ರೈತರಿಗೆ ಹಾಗೂ ಶೇ.3ರಷ್ಟು ಅಂಗವಿಕಲರಿಗೆ ನೀಡಲಾಗುವುದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.