Monday, November 23, 2009

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ: ಅಭಯಚಂದ್ರ ಜೈನ್

ಕೃಷಿ ಮಾಹಿತಿ ಸಪ್ತಾಹ ಉದ್ಘಾಟನೆ
ಮಂಗಳೂರು,ನ.23:ಜಾಗತಿಕ ಆರ್ಥಿಕ ವ್ಯವಸ್ಥೆಯಿಂದ ರೈತನ ಜೀವನ ಮಟ್ಟ ಕುಸಿದಿದ್ದು, ಕೃಷಿಕರ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ವಿಪಕ್ಷ ಮುಖ್ಯ ಸಚೇತಕರು ಹಾಗೂ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಅಭಯಚಂದ್ರ ಜೈನ್ ಅವರು ಹೇಳಿದ್ದಾರೆ.

ಅವರು ದ.ಕ.ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ಮಾಹಿತಿ ಸ್ಪಪ್ತಾಹ ಕಾರ್ಯಕ್ರಮವನ್ನು ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ರೈತನ ಅದರಲ್ಲೂ ಸಣ್ಣ ಹಿಡುವಳಿದಾರನ ಜೀವನ ಕಷ್ಟವಾಗಿದ್ದು, ಬೆಳೆಗಳಿಗೆ ತಗುಲುವ ರೋಗ, ಕೃಷಿ ಮಾಹಿತಿ ಕೊರತೆ, ಆಧುನಿಕ ತಂತ್ರಜ್ಞಾನದ ಬಳಕೆ ತಿಳಿದಿಲ್ಲದಿರುವುದು ಕಾರಣವಾಗಿದ್ದು,ಕೃಷಿಕರಿಗೆ ಪೂರಕ ಮಾಹಿತಿ ನೀಡಲು ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕಿದೆ ಎಂದರು.
ಪಂಚವಾರ್ಷಿಕ ಯೋಜನೆ ಗಳಿಂದಾಗಿ ಕೃಷಿ,ನೀರಾವರಿ ಅಭಿವೃದ್ಧಿಯಾ ಯಿತಾದರೂ ಜನಸಂಖ್ಯೆ ಪ್ರಮಾಣ ಹೆಚ್ಚಿದಂತೆ ಕೃಷಿ ಭೂಮಿ ಕಡಿಮೆಯಾಯಿತು;ಪ್ರಕೃತಿ ವಿಕೋಪದಿಂದ ಆಹಾರೋತ್ಪಾದನೆ ಕುಂಠಿತಗೊಂಡಿತು.ಉಳುವವನೇ ಹೊಲದೊಡೆಯನಾದರೂ ವಿನೂತನ ಸಮಸ್ಯೆಗಳಿಂದಾಗಿ ದೇಶದ ಬೆನ್ನೆಲುಬೆಂದು ಗುರುತಿಸಲ್ಪಡುವ ರೈತರು ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ.ಇಂತಹ ಸಂದರ್ಭದಲ್ಲಿ ಸರ್ಕಾರ ರೈತ ಪರ ಯೋಜನೆಗಳನ್ನು ಹಮ್ಮಿಕೊಂಡು ಅವರಿಗೆ ನೆರವಾಗಬೇಕೆಂದರು. ಉದ್ಯೋಗಖಾತ್ರಿ ಕಾಯಿದೆಯ ಸದುಪಯೋಗವನ್ನು ರೈತರು ಪಡೆಯಬೇಕೆಂದು ಕರೆ ನೀಡಿದ ಅವರು, ರೈತರು ಬಾಳು ಹಸನಾಗುವುದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿ.ಪಂ. ಸದಸ್ಯರಾದ ಸುಚರಿತ ಶೆಟ್ಟಿಯವರು ವಹಿಸಿದ್ದರು.ಜಿ.ಪಂ.ಸದಸ್ಯರಾದ ಶೈಲ ಸಿಕ್ವೇರಾ,ತಾ.ಪಂ. ಸದಸ್ಯ ಜಿ ಎಂ.ಮಹಮದ್ ಸೇರಿದಂತೆ ಹಲವು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ಬಶೀರ್ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಸಹಾಯಕ ನಾಗಪ್ಪ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕೃಷಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮವಿತ್ತು.ಕೃಷಿ ವಸ್ತು ಪ್ರದರ್ಶನದಲ್ಲಿ ರೈತರಿಗೆ ಅನುಕೂಲವಾಗುವ ಮಾಹಿತಿಗಳನ್ನು ನೀಡಲಾಗಿತ್ತು.