Tuesday, November 3, 2009

ವಾಯುಮಾಲಿನ್ಯ ನಿಯಂತ್ರಣ ಮಾಸ

ಮಂಗಳೂರು,ನ.3:ಸಾರ್ವಜನಿಕರು ಮತ್ತು ವಾಹನ ಬಳಕೆದಾರರಲ್ಲಿ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ ತಿಂಗಳನ್ನು ಮಾಲಿನ್ಯ ನಿಯಂತ್ರಣ ಮಾಸವಾಗಿ ಆಚರಿಸಲಾಗುತ್ತಿದ್ದು,ವಾಯು ಮಾಲಿನ್ಯ ನಿಯಂತ್ರಿಸಲು ಸಾರಿಗೆ ಇಲಾಖೆ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಪ್ರಾದೇಶಿಕ ಸಾರಿಗೆ ನಿಯಂತ್ರಣ ಅಧಿಕಾರಿ ಪುರುಷೋತ್ತಮ ತಿಳಿಸಿದ್ದಾರೆ.
ದಿನೇ ದಿನೇ ಹೆಚ್ಚುತ್ತಿರುವ ವಾಹನಗಳು ಮತ್ತು ಅವುಗಳು ಹೊರ ಸೂಸುವ ಹೊಗೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು,ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ ಅನೇಕ ವಿಧವಾದ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ವಾಯುಮಾಲಿನ್ಯ ತಡೆಗೆ ಪ್ರವರ್ತನ ಕಾರ್ಯಗಳನ್ನು ಮತ್ತು ಸಂಬಂಧಿಸಿದ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಕಾರ್ಯದಲ್ಲಿ ಇಲಾಖೆ ನಿರತವಾಗಿದ್ದು, ಎಲ್ಲರ ಸಹಕಾರವನ್ನು ಈ ನಿಟ್ಟಿನಲ್ಲಿ ಕೋರಿದೆ.
ನವೆಂಬರ್ ತಿಂಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಹೊಗೆ ಉಗುಳುವ ವಾಹನಗಳ ವಿಶೇಷ ತಪಾಸಣೆಯನ್ನು ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಚಾಲಕರು/ಮಾಲಕರು ವಾಯು ಮಾಲಿನ್ಯ ನಿಯಂತ್ರಣ ದೃಢಪತ್ರವನ್ನು ಹೊಂದಿರಬೇಕೆಂದು ಮತ್ತು ತಪಾಸಣಾಧಿಕಾರಿಗಳು ಕೇಳಿದಾಗ ಹಾಜರು ಪಡಿಸಬೇಕೆಂದು ಆರ್ ಟಿ ಒ ವಿನಂತಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ಕೆಳಕಂಡ ಪ್ರದೇಶಗಳಲ್ಲಿ ವಾಯುಮಾಲಿನ್ಯ ಪರೀಕ್ಷಾ ಕೇಂದ್ರಗಳಲ್ಲಿ ವಾಯು ಮಾಲಿನ್ಯ ತಪಾಸಣೆಯನ್ನು 50% ರಿಯಾಯಿತಿ ಶುಲ್ಕದೊಂದಿಗೆ ನಡೆಸಲಾಗುವುದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ನವೆಂಬರ್ 11ರಂದು ಮಂಗಳೂರಿನ ಎಲ್ಲಾ ವಾಯು ಮಾಲಿನ್ಯ ಪರೀಕ್ಷಣಾ ಕೇಂದ್ರಗಳಲ್ಲಿ, 17ರಂದು ಬಿ.ಸಿ.ರೋಡಿನ ಶ್ರೀ ಧರ್ಮಶಾಸ್ತ್ರ ವಾಯು ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ,24ರಂದು ವಿಟ್ಲ ಕ್ಯಾಂಪಿನ ನೂಜಿ ವಾಯು ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ, 25ರಂದು ಮೂಡಬಿದ್ರಿಯ ಪ್ರವೀಣ ವಾಯು ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ,27ರಂದು ಮತ್ತೆ ಮಂಗಳೂರಿನ ಎಲ್ಲಾ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆ ನಡೆಸಿ ಪ್ರಮಾಣ ಪತ್ರ ಪಡೆಯಬಹುದಾಗಿದ್ದು, ಎಲ್ಲ ವಾಹನಗಳ ಮಾಲಿಕರು/ಚಾಲಕರು ಈ ಅವಕಾಶದ ಸದ್ಬಳಕೆ ಮಾಡಲು ಕೋರಲಾಗಿದೆ.