Sunday, November 15, 2009

ಗಡಿನಾಡ ಕನ್ನಡಿಗರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ:ಜಯರಾಮರಾಜೇಅರಸ್

ಮಂಗಳೂರು,ನ.15:ಗಡಿನಾಡಲ್ಲಿ,ಹೊರನಾಡಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಕನ್ನಡಿಗರಿಗೆ ವಿಶೇಷ ಸೌಲಭ್ಯಗಳನ್ನು ಅಯವ್ಯಯದಲ್ಲೇ ಘೋಷಿಸಲಾಗಿದ್ದು,ಕನ್ನಡ ಮತ್ತು ಕನ್ನಡಿಗರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿಗಳಾದ ಜಯರಾಮಜರಾಜೇ ಅರಸ್ ಅವರು ಹೇಳಿದರು.
ಅವರು ನ.14 ರಂದು ಕಾಸರಗೋಡಿನ ಬದಿಯಡ್ಕದ ಗುರುಸದನದಲ್ಲಿ ಏರ್ಪಡಿಸಲಾದ ಭಾಷಾ ಭಾವೈಕ್ಯತಾ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಕಾಸರಗೋಡು ಕೇರಳಕ್ಕೆ ಸೇರಿದದರೂ ಗಡಿನಾಡ ಕನ್ನಡಿಗರು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆ ಬಹಳ;ರಾಷ್ಟ್ರಕವಿ ಗೋವಿಂದ ಪೈ,ನಾಡೋಜ ಕಯ್ಯಾರ ಕಿಞಣ್ಣ ರೈ ಅವರು ಕನ್ನಡ ಭಾಷೆಗೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದ ಅವರು,ಒಂದು ಸಂಸ್ಕೃತಿಯ ಉಳಿವು ಭಾಷೆ,ಕಲೆ,ಸಾಹಿತ್ಯದಲ್ಲಿದೆ. ಗಡಿಗಳನ್ನು ಮೀರಿ ಬೆಳೆಯುವ ಸಂಸ್ಕೃತಿಯಿಂದಾಗಿ ಕೊಡು ಕೊಳ್ಳುವಿಕೆಯಲ್ಲೇ ಹಿತ ಅಡಗಿದೆ ಎಂದರು.
ಹಲವು ಜ್ಞಾನಪೀಠಗಳಗಳನ್ನು ಪಡೆದ ಶ್ರೀಮಂತ ಭಾಷೆ ಕನ್ನಡ; ಗಡಿನಾಡುಗಳಲ್ಲಿರುವ ಕನ್ನಡ ಶಾಲೆಗಳಿಗೆ ಮೂಲಭೂತ ಸೌಕರ್ಯ,ಶಿಕ್ಷಕರ ನೇಮಕ,ಪಠ್ಯ ಪುಸ್ತಕ ಒದಗಿಸುವ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು ಎಂದ ಅವರು,ಪುಸ್ತಕ ಮೇಳ, ಗ್ರಂಥಗಳ ಅನುವಾದ ಹಾಗೂ ಉತ್ಸವಗಳಿಗೆ ಸರ್ಕಾರ ವಿಶೇಷ ಅನುದಾನ ನೀಡಿದೆ.ಇನ್ನಷ್ಟು ಉತ್ತಮ ಕೃತಿಗಳ ಅನುವಾದ ಕಾರ್ಯವಾಗಬೇಕಿದೆ.ವೈಕಂ ಮಹಮದ್ ಬಷೀರ್ ಅಂತಹ ಲೇಖಕರ ಅನುವಾದಿತ ಕನ್ನಡ ಕೃತಿಗಳನ್ನು ಓದಿರುವುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಹಲವು ಭಾಷೆಗಳ ತವರೂರಾದ ನಮ್ಮ ನೆಲದಲ್ಲಿ ಎಲ್ಲದಕ್ಕೂ ಸಮಾನ ಗೌರವ ನೀಡಲು ಅಕಾಡಮಿಗಳನ್ನು ರಚಿಸಲಾಗಿದೆ. ಅಭಿವೃದ್ಧಿ ಪ್ರಾಧಿಕಾರವಿದೆ; ಇವರಿಗೆ ಸಾಕಷ್ಟು ಹಣಕಾಸಿನ ನೆರವನ್ನು ಒದಗಿಸಲಾಗಿದೆ. ವಿವಿಧ ರಾಜ್ಯಗಳಲ್ಲಿರುವ ಕನ್ನಡ ಪೀಠಗಳು ಕನ್ನಡದ ಅಭಿವೃದ್ಧಿಗಾಗಿಯೇ ಕಾರ್ಯೋನ್ಮುಖವಾಗಿದೆ. ಕನ್ನಡಿಗರು ಇತರ ಭಾಷೆಯ ಬಗ್ಗೆ ದ್ವೇಷ ಹೊಂದದೆ ತಮ್ಮ ಭಾಷೆಯ ಬಗ್ಗೆ ಅಭಿಮಾನವಿರಿಸುವುದರಿಂದ ಕನ್ನಡ ಬೆಳೆಯಲು ಸಾಧ್ಯ;ಆಡಳಿತ ಭಾಷೆ ಬೇರೆಯಾಗಿದ್ದರೂ, ಮಾತೃ ಭಾಷೆಯ ಮೇಲೆ ಪ್ರೀತಿ ಇದ್ದರೆ ಇಂತಹ ಸಮ್ಮೇಳನಗಳು ಯಶಸ್ವಿಯಾಗುತ್ತವೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ನಾಡೋಜ ಕಯ್ಯಾರ ಕಿಞಣ್ಣ ರೈ ಅವರು, ಸಮೃದ್ಧ ಸಾಹಿತ್ಯದಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ,ಇಂತಹ ಕಾರ್ಯಕ್ರಮಗಳಿಂದ ಕನ್ನಡ ಬೆಳೆಸಲು ನೆರವಾಗಲಿದೆಯಲ್ಲದೆ ಕನ್ನಡಿಗರ ಸಂತಸಕ್ಕೂ ಕಾರಣವಾಗಲಿದೆ ಎಂದರು. ಸಮಾರಂಭಕ್ಕೆ ಸಂಪೂರ್ಣ ಸಹಕಾರ ನೀಡಿ, ಸಮಾರೋಪದಲ್ಲಿ ಸಾನಿಧ್ಯ ವಹಿಸಿದ್ದ ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿಯವರು, ಕರ್ನಾಟಕ ಸರ್ಕಾರ ಕಾಸರಗೋಡಿನ ಕನ್ನಡಿಗರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.ಮುಖ್ಯ ಅತಿಥಿಗಳಾಗಿದ್ದ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಾಹೀನ್ ಕೇಳೋಟ್,ಕಾಸರಗೋಡು ಸಪ್ತಭಾಷೆಯ ಸಂಗಮಭೂಮಿಯಾಗಿದ್ದು, ಭಾಷಾ ವೈಷಮ್ಯ, ಸಂಘರ್ಷಕ್ಕೆ ಅವಕಾಶವಿಲ್ಲ ಎಂದರು; ಐಕ್ಯಗಾನದ ಊರಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಸ್ಕೃತಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದರು. ಡಾ.ಶ್ರೀನಿಧಿ ಸರಳಾಯ, ಚಿತ್ರನಟ ನಿರ್ದೇಶಕ ಶಿವಧ್ವಜ್ ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶಾಂತರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಕೃಷ್ಣ ಪೈ ಸ್ವಾಗತಿಸಿ ದರು. ರಾಜೇಶ್ ಆಳ್ವ ವಂದಿಸಿದರು. ಪ್ರಾಧಿಕಾರದ ಸದಸ್ಯರಾದ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.
ಏಳು ದಿನಗಳ ಕಾಲ ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಲ್ಲಿ ಬಹುಭಾಷಾ ಕವಿಗೋಷ್ಠಿ, ಜನಪದ ಮೆರವಣಿಗೆ, ಗೀತೋತ್ಸವ, ರಂಗೋತ್ಸವ, ನೃತ್ಯೋತ್ಸವ, ಚಿತ್ರೋತ್ಸವ ಏರ್ಪಡಿಸಲಾಗಿತ್ತು. ಸಮಾರೋಪದಂದು ಗಾಯಕರಾದ ರಮೇಶ್ಚಂದ್ರ ನೇತೃತ್ವದಲ್ಲಿ ಗೀತೋತ್ಸವ ನಡೆಯಿತು.