Saturday, November 7, 2009

ರಾಜಕೀಯವನ್ನು ಚುನಾವಣೆಗೆ ಸೀಮಿತಗೊಳಿಸಿ:ಮುಖ್ಯಮಂತ್ರಿ ಚಂದ್ರು

ಮಂಗಳೂರು,ನ.7:ಭಾವನಾತ್ಮಕವಾಗಿ ನಾವು ಭಾರತೀಯರೆಲ್ಲ ಒಂದು;ಅಖಂಡ ಭಾರತ ತ್ರಿಭಾಷಾ ಸೂತ್ರಕ್ಕೆ ಬದ್ಧವಾಗಿದ್ದು,ಭಾಷೆ,ನೀರಿನಲ್ಲಿ ರಾಜಕೀಯ ಬೆರೆಸದೆ ರಾಜಕೀಯವನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಹೇಳಿದರು.
ಅವರು ಇಂದು ಕಾಸರಗೋಡಿನ ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ ಏಳು ದಿನಗಳ ಭಾಷಾ ಭಾವೈಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭೌಗೋಳಿಕ ಅಗತ್ಯಕ್ಕೆ ಅನುಗುಣವಾಗಿ, ವ್ಯವಹಾರಕ್ಕೆ ಅನುಕೂಲವಾಗಿ ಭಾಷಾ ಪ್ರಾಂತ್ಯಗಳು ರಚನೆಯಾದವೇ ವಿನ: ನಾವು ಮೇಲು, ನಮ್ಮ ಭಾಷೆ ಮಾತ್ರ ಮೇಲು ಎಂದು ಹೊಡೆದಾಡಲು ನಮ್ಮ ರಾಜ್ಯಗಳು ರೂಪಿಸಲ್ಪಟ್ಟಿಲ್ಲ.ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ಭಾಷೆಯ ಹೆಸರಿನಲ್ಲಿ ರಾಜಕೀಯ ನಡೆಯುತ್ತಿರುವುದು ದುರಂತ ಎಂದ ಅವರು, 45ರಿಂದ 50ಭಾಷೆಗಳಿರುವ ನಮ್ಮ ರಾಜ್ಯದ ಭಾಷಾ ಶ್ರೀಮಂತಿಕೆ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದರು.
ಗಡಿ ಪ್ರದೇಶಗಳಲ್ಲಿ ಈ ಬಹುಭಾಷಾ ಸಂಸ್ಕೃತಿಯನ್ನು ಕೊಡು- ಕೊಳ್ಳುವಿಕೆಯ ಮೂಲಕ ಇನ್ನಷ್ಟು ಬಲಿಷ್ಠವಾಗಿ ನಮ್ಮ ನಡುವೆ ಸಂಬಂಧ ರೂಪುಗೊಳ್ಳಬೇಕು. ಇದಲ್ಲದೆ ನಾವು ಅಲ್ಲಿ ಸೇರಿಲ್ಲ;ಇಲ್ಲಿ ಸೇರಿಲ್ಲ ಎಂಬ ಸಂಕುಚಿತ ಮನೋಭಾವದಿಂದ ಹೊರಬರಬೇಕು. ಹಲವು ಸಮಸ್ಯೆಗಳಿಗೆ ಪರಸ್ಪರ ವಿಶ್ವಾಸದಿಂದ ಸ್ನೇಹದಿಂದ ಮಾತುಕತೆಯಿಂದ ಪರಿಹಾರ ಸಾಧ್ಯ ಎಂದರು.ನಮ್ಮಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು,ಇದಕ್ಕಾಗಿ ಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕೊಡಿಸಲು, ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಲು, ಉದ್ಯೋಗದಲ್ಲಿ ಆದ್ಯತೆ ನೀಡಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿದ್ದ ವಿಧಾನಸಭಾ ಸದಸ್ಯ ಸಿ ಟಿ ಅಹಮದಾಲಿ ಅವರು ಮಾತನಾಡಿ, ಬಹುಭಾಷಾ ಸಂಗಮಭೂಮಿ,ಸಾಂಸ್ಕೃತಿಕ ರಂಗಭೂಮಿಯಾಗಿರುವ ಕಾಸರಗೋಡಿನಲ್ಲಿ ವಿವಿಧ ಸಮುದಾಯಗಳು ಪರಸ್ಪರ ಸಹಕಾರ,ಸೌಹಾರ್ದತೆಯಿಂದ ಬಾಳುತ್ತಿದ್ದು,ಇದನ್ನು ಇನ್ನಷ್ಟು ಶಕ್ತಗೊಳಿಸಲು ಭಾಷೆ, ಮತದ ಕಟ್ಟುಪಾಡುಗಳನ್ನು ಮೀರಿ ಬೆಳೆಯಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದರು.ಕನ್ನಡದ ರಂಗಕಲಾವಿದರು,ಯಕ್ಷಗಾನ ಕಲಾವಿದರು,ಬರಹಗಾರರು ಸಮೃದ್ಧ ಸಾಹಿತ್ಯವನ್ನು ಕೇರಳಕ್ಕೆ ನೀಡಿದ್ದು, ಕನ್ನಡಿಗರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ನೀಡಿದರು.
ಏಳು ನುಡಿಗಳನ್ನಾಡುವ ಕಾಸರಗೋಡಿನಲ್ಲಿ ರಂಗೋತ್ಸವ, ಸಿನಿಮೋತ್ಸವ,ಗೀತೋತ್ಸವ,ನೃತ್ಯೋತ್ಸವದಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದು, ಇದಕ್ಕೆ ಎಲ್ಲಾ ಕನ್ನಡಪರ ಸಂಘಟನೆಗಳು ಸಹಕರಿಸಿವೆ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಾಧಿಕಾರದ ಸದಸ್ಯ ಸುರೇಶ್ ಪ್ರಾಸ್ತಾವಿಕವಾಗಿ ಹೇಳಿದರು.22 ಕವಿಗಳು ಗೋವಿಂದಪೈ ಅವರ ಗಿಳಿವಿಂಡಿನಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆಯಲ್ಲದೆ ಕಾಸರಗೋಡಿನ ವಿವಿಧ ಪ್ರದೇಶಗಳಲ್ಲಿ ರಂಗೋತ್ಸವ, ಸಿನಿಮೋತ್ಸವಗಳನ್ನು ಆಯೋಜಿಸಲಾಗಿದೆ ಎಂದರು.ಇದರಲ್ಲಿ ನಾಡಿನೆಲ್ಲಡೆಯಿಂದ ಕನ್ನಡಿಗರು ಪಾಲ್ಗೊಳ್ಳಲಿದ್ದಾರೆ ಎಂದರು.
ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದರಲ್ಲದೆ ಸಭಾ ಕಾರ್ಯಕ್ರಮಕ್ಕೆ ಮೊದಲು ಬಹುಭಾಷಾ ಜನಪದ ಮೆರವಣಿಗೆಯನ್ನು ಅವರು ಉದ್ಘಾಟಿಸಿದರು. ಲೋಕಸಭಾ ಸದಸ್ಯ ಕರುಣಾಕರನ್ ಉಪಸ್ಥಿತರಿದ್ದರು. ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕುರಾಯ ಸ್ವಾಗತಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿಷ್ಣು ನಾಯಕ್, ಕಾರ್ಯದರ್ಶಿ ಶಾಂತರಾಜು, ನ್ಯಾಯವಾದಿ ಐ ವಿ ಭಟ್, ಶ್ರೀಮತಿ ಚಂದ್ರು ಭಾಗವಹಿಸಿದ್ದರು.ಎಸ್ ವಿ ಭಟ್ ವಂದಿಸಿದರು.ಸುಂದರವಾದ ಜನಪದ ಮೆರವಣಿಗೆಯಲ್ಲಿ ಕೇರಳದ ಚೆಂಡೆ ಮದ್ದಳೆ,ಶಾಲಾ ಮಕ್ಕಳ ತಂಡ, ಮಂಡ್ಯದ ಪೂಜಾಕುಣಿತ, ಪಟಕುಣಿತ,ಚಿಕ್ಕಮಗಳೂರಿನ ವೀರಗಾಸೆ,ಶಿವಮೊಗ್ಗದ ಡೊಳ್ಳು,ದುಡ್ಡಿಕುಣಿತ, ತಮಟೆ,ದಪ್,ಆಟಿ ಕಳಂಜಾವನ್ನೊಳಗೊಂಡ ಬಹುಭಾಷಾ ಮೆರವಣಿಗೆ ನಗರದಲ್ಲಿ ನಡೆಯಿತು.