Monday, November 2, 2009

ವಿಪತ್ತು ನಿರ್ವಹಣೆಗೆ ಹೈಟೆಕ್ ವ್ಯವಸ್ಥೆ ಅಗತ್ಯ:ಶಾಸಕ ಯೋಗೀಶ್ ಭಟ್

ಮಂಗಳೂರು,ನ.2:ಬಹುಮಹಡಿ ಕಟ್ಟಡಗಳನ್ನು ಹೇರಳವಾಗಿ ಹೊಂದಿದ್ದು,ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಮಂಗಳೂರಿನಲ್ಲಿ ವಿಪತ್ತು ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲೆಯ ಅಗ್ನಿಶಾಮಕ ವ್ಯವಸ್ಥೆಯನ್ನು ಇನ್ನಷ್ಟು ಸಬಲಗೊಳಿಸಬೇಕಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಯೋಗೀಶ್ ಭಟ್ ಹೇಳಿದರು.
ಅವರು ಇಂದು ಕದ್ರಿಯಲ್ಲಿ 1 ಕೋಟಿ 42 ಲಕ್ಷ ರೂ.ವೆಚ್ಚ ಮಾಡಿ ನಿರ್ಮಿಸಲಾದ ನೂತನ ಅಗ್ನಿಶಾಮಕ ಠಾಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ನಗರದ ಪ್ರಮುಖ ಕಟ್ಟಡ ಸಮುಚ್ಛಯಗಳಲ್ಲಿ ಈಗಾಗಲೇ ಅಗ್ನಿ ದುರಂತಗಳಿಗೆ ನಾವು ಸಾಕ್ಷಿಯಾಗಿದ್ದು,ಕ್ಲಪ್ತ ಸಮಯದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ಬೆಂಕಿಯೊಡನೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ಹಿನ್ನಲೆಯನ್ನು ಗಮನದಲ್ಲಿರಿಸಿ ಕಟ್ಟಡ ನಿರ್ಮಾಣ ಕಾನೂನು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಐ ಜಿ ಪಿ.ಎಸ್. ಸಂಧು ಅವರು ಮಾತನಾಡಿ, ಅಗ್ನಿಶಾಮಕ ಪಡೆಯ ಸಿಬ್ಬಂದಿಗಳು ವಿಪತ್ತು ನಿರ್ವಹಣೆಯ ಸಂದರ್ಭದಲ್ಲಿ ತೋರುವ ಕಾರ್ಯಕ್ಷಮತೆಯನ್ನು ಕೊಂಡಾಡಿದರು.ಕರ್ನಾಟಕದಲ್ಲಿ 156 ಅಗ್ನಿಶಾಮಕ ಠಾಣೆಗಳಿವೆ. ಇನ್ನು 51 ಠಾಣೆಗಳನ್ನು ತೆರೆಯುವ ನಿಟ್ಟಿನಲ್ಲಿ ಇಲಾಖೆ ಕಾರ್ಯತತ್ಪರವಾಗಿದೆ. ಬಂಟ್ವಾಳ ತಾಲೂಕು ಮಟ್ಟದ ಠಾಣೆಗೆ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲೇ ಇದನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದರು.ಜಿಲ್ಲಾಧಿಕಾರಿಗಳ ಪ್ರೋತ್ಸಾಹದಿಂದ ಮಂಗಳೂರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ವಿಪತ್ತು ನಿರ್ವಹಣೆಗೆ ವಿನೂತನ ಟೆಕ್ನಾಲಜಿಯನ್ನು ಅಳವಡಿಸಲು ಮಿಸ್ಟ್ ಟಕ್ನಾಲಜಿ, ವಾಟರ್ ಬ್ರೌಸರ್ ನಂತಹ ಉಪಕರಣಗಳನ್ನು ಖರೀದಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದ ವೇಳೆ ಪಡೆಯುವ ಅನುಮತಿ ಮತ್ತು ನಂತರ ಅನುಮತಿಯನ್ನು ಮೀರಿ ವಿಸ್ತರಿಸುವ ಕಟ್ಟಡ ಕಾಮಗಾರಿಯಿಂದ ಹೆಚ್ಚಿನ ಅನಾಹುತಗಳು ಸಂಭವಿಸುವುದು ತಮ್ಮ ಗಮನಕ್ಕೆ ಬಂದಿದ್ದು, ಇದಕ್ಕೆ ಹೊಣೆಗಾರರನ್ನು ನಿಗದಿಪಡಿಸುವ ಕಾರ್ಯವಾಗಬೇಕಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ನಾಮಫಲಕ ಅನಾವರಣಗೊಳಿಸಿ,ಬಂಟ್ವಾಳ ತಾಲೂಕಿಗೆ ಅಗ್ನಿಶಾಮಕ ಠಾಣೆ ಬೇಡಿಕೆ ಈಡೇರಿಸಬೇಕೆಂದು ಹೇಳಿದರು. ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಪಶ್ಷಿಮ ವಲಯ ಐ ಜಿ ಪಿ ಗೋಪಾಲ್ ಹೊಸೂರ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್, ಕದ್ರಿ ಕಾರ್ಪೊರೇಟರ್ ಜಯಾನಂದ ಅಂಚನ್, ಉಪಸ್ಥಿತರಿದ್ದರು. ಪ್ರಾದೇಶಿಕ ಅಗ್ನಿಶಾಮಕ ಮುಖ್ಯ ಅಧಿಕಾರಿ ವರದರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಗ್ನಿಶಾಮಕ ಅಧಿಕಾರಿ ಬಸವಣ್ಣ ವಂದಿಸಿದರು.