Friday, May 15, 2009

ಮತ ಎಣಿಕೆಗೆ ಅಂತಿಮ ಹಂತದ ಸಿದ್ಧತೆ ಪೂರ್ಣ

ಮಂಗಳೂರು, ಮೇ 15: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಮೇ 16ರಂದು ನಡೆಯಲಿದ್ದು, ಅಂತಿಮ ಹಂತದ ಸಿದ್ದತೆಗಳು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಅವರ ನೇತೃತ್ವದಲ್ಲಿ ನಡೆಯಿತು. ಮತ ಎಣಿಕೆ ಕಾರ್ಯ ಯಾವುದೇ ಗೊಂದಲಗಳಿಲ್ಲದೆ ನಿರ್ವಿಘ್ನವಾಗಿ ನಡೆಯಲು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಸಭೆ ಮಾಧ್ಯಮ ಕೇಂದ್ರದಲ್ಲಿ ನಡೆಯಿತು.
ಎಣಿಕೆ ಕೇಂದ್ರದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಮಾಕ್ ಟೆಸ್ಟ್ ಪ್ರಾಯೋಗಿಕವಾಗಿ, ಯಶಸ್ವಿಯಾಯಿತು. ಇದೇ ಸಂದರ್ಬದಲ್ಲಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್ ಅವರು ಎಣಿಕೆ ಕೇಂದ್ರಕ್ಕೆ ಅಗಮಿಸಿ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಜಿಲ್ಲಾ ಕೇಂದ್ರ ಸ್ಥಾನಿಕ ಸಹಾಯಕರಾದ ಶ್ರೀ ಪ್ರಭಾಕರ್ ಶರ್ಮಾ ಅವರು ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸುವ ಹೊಣೆಯನ್ನು ಹೊತ್ತಿದ್ದರಲ್ಲದೆ ಎಲ್ಲರಿಗೂ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಂತಿಮ ಕ್ಷಣದವರೆಗೂ ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಗಣಕೀಕರಣ ವ್ಯವಸ್ಥೆಯ ಸಂಪೂರ್ಣ ಹೊಣೆಯನ್ನು ಶ್ರೀ ಅಶ್ವಿನ್ ಅವರು ನಿರ್ವಹಿಸುತ್ತಿದ್ದಾರೆ. ಸುಗಮ ಕಲಾಪಕ್ಕೆ ಸೂಕ್ತ ವ್ಯವಸ್ಥೆಗಳಾಗಿವೆ.