Wednesday, May 27, 2009

ಕಳವಾರ್ ಪದವಿನಲ್ಲಿ ಕಚ್ಚಾತೈಲ ಸಂಗ್ರಹಣಾಗಾರಕ್ಕೆ ಭೂಮಿಪೂಜೆ


ಮಂಗಳೂರು, ಮೇ 27: ದೇಶದ ಇಂಧನ ಭದ್ರತೆ ಯೋಜನೆಯಡಿ ಮಂಗಳೂರಿನ ಕಳವಾರು ಪದವಿನಲ್ಲಿ 1.5 ಮೆಟ್ರಿಕ್ ಟನ್ ಗಳಷ್ಟುಕಚ್ಚಾ ತೈಲ ಸಂಗ್ರಹಿಸುವ ಯೋಜನೆಗೆ ಇಂದು(ಮೇ27)ಭೂಮಿ ಪೂಜೆ ನೆರವೇರಿಸಲಾಯಿತು.ಸುಮಾರು ಒಂದು ಸಾವಿರ ಕೋಟಿ ರೂ.ಗಳ ಯೋಜನೆ ಇದಾಗಿದ್ದು, 2012ರಲ್ಲಿ ಕಾರ್ಯಾರಂಭ ಮಾಡಲಿದೆ. ಈಗ ಈ ಉದ್ದೇಶಕ್ಕಾಗಿ 82 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಇನ್ನು 18 ಎಕರೆ ಭೂಸ್ವಾಧೀನಕ್ಕೆ ಕ್ರಮಕೈಗೊಳ್ಳಲಾಗಿದೆ.
ದಕ್ಷಿಣ ಕೊರಿಯಾ ಇಂಜಿನಿಯರಿಂಗ್ ಕಂಪೆನಿ ಮತ್ತು ದೆಹಲಿಯ ಕರಮ್ ಚಂದ್ ಥಾಪರ್ ಕಂಪೆನಿಗಳು ಜಂಟಿಯಾಗಿ ಯೋಜನಾ ಕಾರ್ಯವನ್ನು ಕೈಗೊಂಡಿದ್ದು, ಈ ತೈಲಾಗಾರ ದೇಶದ 14 ದಿನಗಳ ಅಗತ್ಯವನ್ನು ಪೂರೈಸಲಿದೆ. ಇಂತಹುದೇ ತೈಲಾಗಾರಗಳು ಉಡುಪಿಯ ಪದೂರು ಮತ್ತು ವಿಶಾಖಾಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಇಲ್ಲಿ 5 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಕಚ್ಚಾ ತೈಲ ಸಂಗ್ರಹ ಸಾಧ್ಯವಾಗಲಿದೆ.
ಭೂಮಿ ಪೂಜೆಯನ್ನು ಎಂಎಸ್ಇಝಡ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎ. ಜಿ. ಪೈ ನೆರವೇರಿಸಿದರು. ಭೂಸ್ವಾಧೀನಾಧಿಕಾರಿ ಕೃಷ್ಣಮೂರ್ತಿ, ಇಂಜಿನಿಯರ್ ಎಸ್. ಶ್ರೀನಿವಾಸನ್, ವಿಜಯಾನಂದ, ಉತ್ಪಾದನಾ ಘಟಕದ ವ್ಯವಸ್ಥಾಪಕ ಕುಂಗ್ ಹಿ ಕಿಮ್ ಸೇರಿದಂತೆ ಯೋಜನಾ ಸಂಬಂಧಿ ಅಧಿಕಾರಿಗಳು ಭೂಮಿ ಪೂಜೆಯಲ್ಲಿ ಪಾಲ್ಗೊಂಡರು.