Monday, May 4, 2009

ಸಿಇಟಿ: ವಿದ್ಯಾರ್ಥಿಗಳು ಸುಸೂತ್ರ ಪರೀಕ್ಷೆ ಬರೆಯಲು ಸರ್ವ ಕ್ರಮ


ಮಂಗಳೂರು, ಮೇ. 4: 2009ನೇ ಸಾಲಿನ ವೃತ್ತಿ ಶಿಕ್ಷಣದ ಸಾಮಾನ್ಯ ಪ್ರವೇಶ ಪರೀಕ್ಷೆ ಜಿಲ್ಲೆಯ 12 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯಿಂದ ಯಾವುದೇ ವಿದ್ಯಾರ್ಥಿಗಳು ವಂಚಿತರಾಗದಂತೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಕೇಂದ್ರ ಸ್ಥಾನೀಯ ಸಹಾಯಕರಾದ ಶ್ರೀ ಪ್ರಭಾಕರ ಶರ್ಮಾ ಅವರು ಹೇಳಿದರು.
ಸಿಇಟಿ ಪರೀಕ್ಷೆ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೈಗೊಳ್ಳಲಾದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳ ಹಕ್ಕು; ವಿದ್ಯಾರ್ಥಿಗಳಿಗೆ ಯಾವುದೇ ಅನಾನೂಕೂಲವಾಗದಂತೆ ಸಂಬಂಧಪಟ್ಟ ಎಲ್ಲಾ ಕಾಲೇಜು ಪರೀಕ್ಷಾ ಮುಖ್ಯಸ್ಥರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ನಗರದಲ್ಲಿ 10 ಮತ್ತು ಪುತ್ತೂರಿನಲ್ಲಿ 2 ಪರೀಕ್ಷಾ ಕೇಂದ್ರಗಳಿದ್ದು, ಇಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ವರದಿಯನ್ನು ಪಡೆಯಲಾಯಿತು. ಸಂತ ಅಲೋಷಿಯಸ್ ಕಾಲೇಜಿನಲ್ಲಿ 861 ವಿದ್ಯಾರ್ಥಿಗಳಿಗೆ 54 ಕೊಠಡಿಗಳು, ಶ್ರೀ ಮಧುಸೂಧನ ಕುಶೆ ಪ. ಪೂ. ಕಾಲೇಜು ಅತ್ತಾವರದಲ್ಲಿ 592 ಮಕ್ಕಳು 37 ಕೊಠಡಿಗಳಲ್ಲಿ, ಕಾರ್ ಸ್ಟ್ರೀಟ್ನಲ್ಲಿರುವ ಸರ್ಕಾರಿ ಪ. ಪೂ . ಕಾಲೇಜಿನಲ್ಲಿ 512 ಮಕ್ಕಳಿಗೆ 32 ಕೊಠಡಿಗಳು, ಸಂತ ಆಗ್ನೇಸ್ ಕಾಲೇಜಿನಲ್ಲಿ 608 ವಿದ್ಯಾರ್ಥಿಗಳು 38 ಕೊಠಡಿಗಳಲ್ಲಿ, ಬೆಸೆಂಟ್ ಕಾಲೇಜಿನಲ್ಲಿ 512 ಮಕ್ಕಳು 32 ಕೊಠಡಿಗಳಲ್ಲಿ, ಬಲ್ಮಠದಲ್ಲಿ 608 ವಿದ್ಯಾರ್ಥಿಗಳು 38 ಕೊಠಡಿಗಳಲ್ಲಿ, ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ 512 ವಿದ್ಯಾರ್ಥಿಗಳು 32 ಕೊಠಡಿಗಳಲ್ಲಿ, ಮಿಲಾಗ್ರಿಸ್ ಪ. ಪೂ. ಕಾಲೇಜಿನಲ್ಲಿ 608 ವಿದ್ಯಾರ್ಥಿಗಳು 38 ಕೊಠಡಿಗಳಲ್ಲಿ, ಗಣಪತಿ ಪ. ಪೂ. ಕಾಲೇಜಿನಲ್ಲಿ 512 ವಿದ್ಯಾರ್ಥಿಗಳು,32 ಕೊಠಡಿಗಳಲ್ಲಿ, ಸೈಂಟ್ ಆನ್ಸ್ ಕಾಲೇಜಿನಲ್ಲಿ 416 ವಿದ್ಯಾರ್ಥಿಗಳಿಗೆ 26 ಕೊಠಡಿಗಳಲ್ಲಿ ಪರೀಕ್ಷೆ ಬರೆಯಲಿರುವರು. ಪುತ್ತೂರಿನಲ್ಲಿರುವ ಫಿಲೋಮಿನಾ ಕಾಲೇಜಿನಲ್ಲಿ 592 ವಿದ್ಯಾರ್ಥಿಗಳು 37 ಕೊಠಡಿಗಳಲ್ಲಿ, ಪುತ್ತೂರು ಸರ್ಕಾರಿ ಪ. ಪೂ. ಕಾಲೇಜಿನಲ್ಲಿ 496 ವಿದ್ಯಾರ್ಥಿಗಳಿಗೆ 31 ಕೊಠಡಿಗಳನ್ನು ಕಾದಿರಿಸಲಾಗಿದ್ದು, ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದ್ದು, ಪರೀಕ್ಷಾ ವೀಕ್ಷಕರು ಪರೀಕ್ಷಾ ಸ್ಥಳಕ್ಕೆ ಒಂದು ಗಂಟೆ ಮೊದಲೇ ಆಗಮಿಸಿ ವ್ಯವಸ್ಥೆಗಳನ್ನು ಪರಿಶೀಲಿಸುವರು. ಈ ಸಂಬಂಧ ಪರೀಕ್ಷಾ ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ನೀಡಲು ಎಚ್ ಕ್ಯೂ ಎ ಅವರು ಕಟ್ಟು ನಿಟ್ಟಿನ ಮಾರ್ಗದರರ್ಶನ ನೀಡಿದ್ದು, ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲವಾಗದಂತೆ ತಡೆಯಲು ಅವರು ಸಮರ್ಥರಿರಬೇಕು ಮತ್ತು ಈ ಸಂಬಂಧ ಪೂರಕ ಮಾಹಿತಿ ಅವರಲ್ಲಿರಬೇಕು ಎಂದು ಸೂಚಿಸಿದ್ದಾರೆ.
ಸಿಇಟಿ ಯಶಸ್ವಿಯಾಗಿ ನಡೆಯಲು ಅಗತ್ಯ ಕ್ರಮಗಳ ಬಗ್ಗೆ ಸಭೆಯಲ್ಲಿ ಅನುಭವಿಗಳ ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಸಬೆಯಲ್ಲಿ ಪುತ್ತೂರ ಎ ಸಿ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.