Tuesday, May 12, 2009

ಮತ ಎಣಿಕೆ: ಮದ್ಯಮುಕ್ತ ದಿನ ಘೋಷಣೆ

ಮಂಗಳೂರು, ಮೇ. 12: ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಮೇ 16ರಂದು ನಡೆಯಲಿದ್ದು, ಜಿಲ್ಲೆಯಾದ್ಯಂತ ಮೇ 15ರಂದು ಮಧ್ಯರಾತ್ರಿಯಿಂದ ಮೇ 16ರ ಮಧ್ಯ ರಾತ್ರಿಯವರೆಗಿನ ಅವಧಿಯನ್ನು ಮದ್ಯಮುಕ್ತ ದಿನಗಳೆಂದು ಘೋಷಿಸಿ ಜಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಮತ ಎಣಿಕೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಮತ್ತು ಶಾಂತಿಯುತವಾಗಿ ನಡೆಸಲು ಕರ್ನಾಟಕ ಅಬಕಾರಿ ಸನ್ನದುಗಳು ನಿಯಮದಡಿ ಆದೇಶ ಹೊರಡಿಸಲಾಗಿದ್ದು, ಕರ್ನಾಟಕ ಅಬಕಾರಿ ಕಾಯಿದೆ 1965ರಡಿ ಕಾರ್ಯಾಚರಿಸುತ್ತಿರುವ ಸನ್ನದು ಆವರಣಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಹಾಗೂ ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ಆದೇಶಿಸಲಾಗಿದೆ. ಜಿಲ್ಲೆಯ ಹೋಟೇಲುಗಳಲ್ಲಿ, ಕ್ಲಬ್ ಗಳಲ್ಲಿ, ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ನಿಷೇಧಿಸಲಾಗಿದ್ದು, ವೈನ್ ಶಾಪ್, ಬಾರ್ ನ ಮುಂದಿನ ಹಾಗೂ ಹಿಂದಿನ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಮೊಹರುಗಳನ್ನು ಹಾಕಿ ಕಡ್ಡಾಯವಾಗಿ ಮುಚ್ಚುವಂತೆ ಅಬಕಾರಿ ಉಪ ಆಯುಕ್ತರಿಗೆ ಜಿಲ್ಲಾ ದಂಡಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಮೇ 15 ಸಂಜೆಯಿಂದ 18ರ ಮಧ್ಯರಾತ್ರಿವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮತ ಎಣಿಕೆ ಸಂದರ್ಬದಲ್ಲಿ ಶಾಂತ ಪರಿಸ್ಥಿತಿ ನೆಲೆಗೊಳಿಸಲು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. ಮತ ಎಣಿಕೆ ಸಂದರ್ಬದಲ್ಲಿ ಪಟಾಕಿ ಸಿಡಿಸುವುದನ್ನು ಹಾಗೂ ವಿಜಯೋತ್ಸವ ಆಚರಣೆಗೂ ಅವಕಾಶ ನೀಡಲಾಗಿಲ್ಲ.