Thursday, May 14, 2009

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮತ ಎಣಿಕೆ ಕೇಂದ್ರ ಸಿದ್ಧತೆ ಪರಿಶೀಲನೆ

ಮಂಗಳೂರು,ಮೇ. 14: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ಪ್ರಕ್ರಿಯೆ ಕೆನರಾ ಕಾಲೇಜಿನಲ್ಲಿ ನಡೆಯಲಿದ್ದು, ಜಿಲ್ಲಾಡಳಿತ ಈ ಸಂಬಂಧ ಸರ್ವಸಿದ್ಧತೆಗಳನ್ನು ಕೈಗೊಂಡಿದೆ. 14 ರಂದು ಬೆಳಗ್ಗೆ ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ಅವರು ಮತ ಎಣಿಕೆ ಕೇಂದ್ರದ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಮೇ 16ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು, 15 ಕೊಠಡಿಗಳಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ಸಿದ್ಧತೆ ಪೂರ್ಣಗೊಂಡಿದೆ. ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಜನರು ಗುಂಪುಗೂಡಲು ಅವಕಾಶವಿಲ್ಲ; ಪತ್ರಕರ್ತರಿಗಾಗಿ ಮಾಧ್ಯಮ ಕೇಂದ್ರ ತೆರೆಯಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಕೆನರಾ ಪದವಿಪೂರ್ವ ಕಾಲೇಜಿನ ಹಳೆ ಬ್ಲಾಕ್ ನ 1ನೇ ಮಹಡಿ, ಕೊಠಡಿ ಸಂಖ್ಯೆ 1 ಮತ್ತು2 ರಲ್ಲಿ ತಲಾ 7 ಮೇಜುಗಳಲ್ಲಿ ನಡೆಯಲಿದೆ. ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಎಣಿಕೆ ಹಳೆ ಬ್ಲಾಕ್ ನ ನೆಲಮಹಡಿಯ ಕೊಠಡಿ ಸಂಖ್ಯೆ 19 ಮತ್ತು 20ರಲ್ಲಿ 6 ಮೇಜುಗಳಲ್ಲಿ ನಡೆಯಲಿದೆ.
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಕಾಲೇಜಿನ ಹೊಸ ಬ್ಲಾಕ್ ನ 3ನೇ ಮಹಡಿ ಕೊಠಡಿ ಸಂಖ್ಯೆ 34ರಲ್ಲಿ 14 ಮೇಜುಗಳಲ್ಲಿ, ಮಂಗಳೂರು ನಗರ ದಕ್ಷಿಣದ ಮತ ಎಣಿಕೆ ಕಾಲೇಜಿನ ನೆಲಮಹಡಿಯ ಕೊಠಡಿ ಸಂಖ್ಯೆ 13 ಮತ್ತು 14ರಲ್ಲಿ ತಲಾ ಏಳು ಮೇಜುಗಳಲ್ಲಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ ಹಳೆ ಬ್ಲಾಕ್ ನ ಒಂದನೇ ಮಹಡಿ ಕೊಠಡಿ ಸಂಖ್ಯೆ 8 ಮತ್ತು 9 ರಲ್ಲಿ ತಲಾ 6 ಮೇಜುಗಳಲ್ಲಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ 1 ನೇ ಮಹಡಿಯ ಕೊಠಡಿ ಸಂಖ್ಯೆ 23 ಮತ್ತು 24ರಲ್ಲಿ ತಲಾ 7 ಮೇಜುಗಳಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ ಹೊಸ ಬ್ಲಾಕ್ ನ ಎರಡನೇ ಮಹಡಿ ಕೊಠಡಿ ಸಂಖ್ಯೆ 30 ಮತ್ತು 31ರಲ್ಲಿ ತಲಾ 6 ಮೇಜುಗಳಲ್ಲಿ, ಸುಳ್ಯ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ 1ನೇ ಮಹಡಿ ಕೊಠಡಿ ಸಂಖ್ಯೆ 27 ಮತ್ತು 28ರಲ್ಲಿ ತಲಾ 7 ಮೇಜುಗಳಲ್ಲಿ ನಡೆಯಲಿದೆ.
ಚುನಾವಣಾ ಮಾಹಿತಿಗಾಗಿ ಕಂಪ್ಯೂಟರ್ ಗಳನ್ನು ಅಳವಡಿಸಲಾಗಿದ್ದು, ಪ್ರತಿ ಸುತ್ತಿನ ಮತ ಎಣಿಕೆ ವಿವರ ತಕ್ಷಣವೇ ಲಭ್ಯವಾಗಲಿದೆ. ಈ ಸಂದರ್ಭದಲ್ಲಿ ಮಂಗಳೂರು ಮಹಾ ನಗರಪಾಲಿಕೆ ಆಯುಕ್ತ ಶ್ರೀ ಸಮೀರ್ ಶುಕ್ಲಾ, ಕೇಂದ್ರ ಸ್ಥಾನೀಯ ಸಹಾಯಕರಾದ ಶ್ರೀ ಪ್ರಭಾಕರ ಶರ್ಮಾ, ಮಂಗಳೂರು ತಾಲೂಕಿನ ಸಹಾಯಕ ಆಯುಕ್ತ ಶ್ರೀ ಪ್ರಭುಲಿಂಗ ಕಾವಳಕಟ್ಟೆ, ಶ್ರೀ ಮೋಹನ್ ರಾವ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.