Friday, October 30, 2009

ತಾಲೂಕು ಮಟ್ಟದ ಸಭೆಗೆ ಹಾಜರಾಗದಿದ್ದರೆ ಇಲಾಖಾ ವಿಚಾರಣೆ: ಜಿಲ್ಲಾಧಿಕಾರಿ ಪೊನ್ನುರಾಜ್

ಮಂಗಳೂರು,ಅ.30: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪದಾಧಿಕಾರಿಗಳ ಮತ್ತು ದಲಿತ ಮುಖಂಡರ ಸಭೆಗಳನ್ನು ತಾಲೂಕು ಮಟ್ಟದಲ್ಲಿ ಏರ್ಪಡಿಸಿದಾಗ ಸಂಬಂಧ ಪಟ್ಟ ಅಧಿಕಾರಿಗಳು ಸಭೆಗೆ ಹಾಜರಾಗದಿದ್ದರೆ ಕರ್ತವ್ಯ ಲೋಪ ಆರೋಪ ಹೊರಿಸಿ ಇಲಾಖಾ ವಿಚಾರಣೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಶಿಸ್ತು ಪ್ರಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪದಾಧಿಕಾರಿಗಳ ಮತ್ತು ದಲಿತ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,ಮೇಲ್ಕಂಡ ಸಭೆಗಳಲ್ಲಿ ಪ್ರಮುಖವಾಗಿ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳೇ ಚರ್ಚೆಗೆ ಬರುತ್ತದೆ; ಹಲವಾರು ಕಾರಣಗಳಿಂದ ಪ್ರತಿ ಸಭೆಯಲ್ಲೂ ಹಳೆ ಸಮಸ್ಯೆಗಳೇ ಪ್ರಸ್ತಾಪವಾಗುತ್ತವೆ ಹಾಗೂ ಇದಕ್ಕೆ ಸೂಕ್ತ ಪರಿಹಾರ ರೂಪಿಸಲು ವಿಳಂಬವಾಗುತ್ತಿದೆ.ಪ್ರತಿಯೊಂದು ಪ್ರಕರಣಗಳಿಗೂ ಅರ್ಥಪೂರ್ಣ ಪರಿಹಾರ ಒದಗಿಸುವುದೇ ಸಭೆಗಳ ಉದ್ದೇಶವಾಗಬೇಕು;ಕಾಟಾಚಾರದ ಸಭೆಯಿಂದ ಯಾರಿಗೂ ಲಾಭವಿಲ್ಲ ಎಂದರು.
ಸಭೆಗಳು ಪರಿಣಾಮಕಾರಿಯಾಗಿ ಮೂಡಿಬರಲು ತಾಲೂಕು ಮಟ್ಟದಲ್ಲಿ ಪ್ರಥಮ ಹಂತ ಸಭೆ ನಡೆದು ಅಲ್ಲಿ ಪರಿಹಾರ ಸಿಗದ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಬೇಕು ಇದರಿಂದ ಸಮಸ್ಯೆ ಪರಿಹಾರಕ್ಕೆ ಹಂತಹಂತವಾಗಿ ಕ್ರಮಕೈಗೊಳ್ಳಲು ಸಾಧ್ಯ ಎಂದರು.
ಆದರೆ ತಾಲೂಕು ಮಟ್ಟದ ಸಭೆಗಳಲ್ಲಿ ಅಧಿಕಾರಿಗಳ ಸಕ್ರಿಯ ಹಾಗೂ ಪರಿಣಾಮಕಾರಿ ಭಾಗವಹಿಸುವಿಕೆಯ ಬಗ್ಗೆ ಸಭೆಯಲ್ಲಿ ಅಪಸ್ವರ ಮೂಡಿದ್ದರಿಂದ ಜಿಲ್ಲಾಧಿಕಾರಿಗಳು ಮೇಲ್ಕಂಡಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಜಿಲ್ಲೆಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಅಂಬೇಡ್ಕರ್ ಜಯಂತಿ ಆಚರಣೆ,100 ವರ್ಷಗಳಿಂದ ಒಂದೇ ಕಡೆ ನೆಲೆಸಿರುವ ದಲಿತ ಕುಟುಂಬಗಳಿಗೆ ಭೂಮಿಯ ಹಕ್ಕು ನೀಡುವ ಬಗ್ಗೆ,ಅವರಿಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ನಗರದ ಹೃದಯಭಾಗದಲ್ಲಿರುವ ಕುದ್ಮುಲ್ ರಂಗರಾವ್ ಸಭಾಭವನವನ್ನು ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಬಳಸಿದ್ದು,ಈ ಜಮೀನು ಮತ್ತು ಕಟ್ಟಡದ ದುರ್ಬಳಕೆಯ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕುದ್ಮುಲ್ ರಂಗರಾವ್ ನೀಡಿರುವ ಸ್ಥಳವನ್ನು ಸದ್ಬಳಕೆ ಮಾಡಲು ಮತ್ತು ಖಾಲಿ ಉಳಿದ ಮಳಿಗೆಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಳಕೆಗೆ ಮೀಸಲಿಡಲು ಇದರಿಂದ ಬರುವ ಉಳಿತಾಯವನ್ನು ಸಾಮಾಜಿಕ ಚಟುವಟಿಕೆ ಬಳಸಲು ಸಭೆಯಲ್ಲಿ ನಿರ್ಧರಿಸಲಾಯಿತು. ರಂಗರಾವ್ ಅವರು 150 ನೇ ಜನ್ಮ ದಿನೋತ್ಸವದ ಸಂದರ್ಭದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗಾಗಲೇ ಇರುವ ಸಮಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಐವರನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸುವ ಸಲಹೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಪುತ್ತೂರು, ಸುಳ್ಯ ತಾಲೂಕುಗಳಿಂದ ಆಗಮಿಸಿದ ಮುಖಂಡರು,ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಗಳ ಸಮಸ್ಯೆ, ಆಶ್ರಮ ಶಾಲೆಯಲ್ಲಿ ಶಿಕ್ಷಕರ ನೇಮಕ ಮಾಡುವಾಗ ಪರಿಶಿಷ್ಟ ವರ್ಗ ಮತ್ತು ಪಂಗಡದವರಿಗೆ ಆದ್ಯತೆ ನೀಡಲು,ವಿದ್ಯಾರ್ಥಿ ನಿಲಯಗಳಲ್ಲಿ ಉತ್ತಮ ಆಹಾರ ಮತ್ತು ಟ್ಯೂಷನ್ ನೀಡುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಒಟ್ಟು 60 ವಿದ್ಯಾರ್ಥಿ ನಿಲಯಗಳಿದ್ದು, ಪ್ರತಿ ತಿಂಗಳಿಗೊಮ್ಮೆ 4ರಿಂದ 5 ಹಾಸ್ಟೆಲ್ ಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಊಟ ಮಾಡಿ, ಮಕ್ಕಳೊಂದಿಗೆ ಬೆರೆತು ಸಮಸ್ಯೆ ಅರಿಯುವ ಬಗ್ಗೆ, ಆಹಾರದಲ್ಲಿ ಲೋಪವಾಗದಂತೆ ಡಬಲ್ ಲಾಕ್ ಸಿಸ್ಟಮ್ ಅಳವಡಿಸಲು, ವಾರ್ಡ ನ್ ಬಳಿ ಒಂದು ಬೀಗ ಮತ್ತು ವಿದ್ಯಾರ್ಥಿ ಸಮಿತಿ ಬಳಿ ಒಂದು ಬೀಗವನ್ನಿರಿಸಿ ಸೋರಿಕೆ ತಡೆ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.ಹಾಸ್ಟೆಲ್ ಭೇಟಿ ಬಳಿಕ ಫೀಡ್ ಬ್ಯಾಕ್ ವರದಿ ಕಡ್ಡಾಯವಾಗಿರಬೇಕೆಂದ ಜಿಲ್ಲಾಧಿಕಾರಿಗಳು, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಪಡೆಯಲು ಮಧ್ಯವರ್ತಿಗಳ ಹಾವಳಿ ತಡೆಗೆ ಸೂಕ್ತ ಕ್ರಮಕೈಗೊಳ್ಳಲು ನಿಗಮದ ಮ್ಯಾನೇಜರ್ ಉಳ್ಳಯ್ಯ ಅವರಿಗೆ ಸೂಚಿಸಿದರು. ಡಿ ಸಿ ಮನ್ನಾ ಜಮೀನಿನ ಬಗ್ಗೆ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಪುತ್ತೂರು ಎ ಸಿ ಹರೀಶ್ ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಗಣಪತಿ, ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್ ಪಿ ಮಿತ್ರ ಹೆರಾಜೆ, ತಹಸೀಲ್ದಾರ್ ಮಂಗಳೂರು, ಬಂಟ್ವಾಳ ಉಪಸ್ಥಿತರಿದ್ದರು.