Tuesday, October 6, 2009

ಪ್ರವಾಹ ಸಂತ್ರಸ್ತರ ನೆರವಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಾಳೆ ಪಾದಯಾತ್ರೆ

ಮಂಗಳೂರು,ಅ.6:ರಾಜ್ಯದ 15 ಜಿಲ್ಲೆಗಳು ನೆರೆ ಪ್ರವಾಹದಿಂದ ತತ್ತರಿಸಿದ್ದು, ಪ್ರವಾಹ ಪೀಡಿತರಿಗೆ ಸಕಾಲದಲ್ಲಿ ಅಗತ್ಯ ನೆರವು ನೀಡಲು ದಕ್ಷಿಣ ಕನ್ನಡ ಜಿಲ್ಲೆ ಮುಂದಾಗಿದ್ದು, ದೇಣಿಗೆ ಸಂಗ್ರಹ ದುರುಪಯೋಗವಾಗದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ತಿಳಿಸಿದ್ದಾರೆ.
ಇಂದು ನಗರದ ಸರ್ಕ್ಯುಟ್ ಹೌಸ್ ನಲ್ಲಿ ಏರ್ಪಡಿಸಲಾದ ಜಂಟಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಣಿಗೆ ಸಂಗ್ರಹಕ್ಕೆ ಮುಂದಾಗುವ ಯಾವುದೇ ಸಂಘ ಸಂಸ್ಥೆಗಳು ಅಥವಾ ವ್ಯಕ್ತಿಗಳು ಜಿಲ್ಲಾಧಿಕಾರಿಗಳಿಂದ ಅಧಿಕೃತ ಒಪ್ಪಿಗೆ ಪತ್ರವನ್ನು ಪಡೆಯಬೇಕು ಎಂದು ಹೇಳಿದರು. ಈ ಸಂಬಂಧ ಸಂಪೂರ್ಣ ಹೊಣೆ ಜಿಲ್ಲಾಧಿಕಾರಿಗಳದಾಗಿದ್ದು, ಅ.7 ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹಕ್ಕೆ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯಲ್ಲಿ ಎಲ್ಲಾ ಅಧಿಕಾರಿಗಳು ಪಾಲ್ಗೊಳ್ಳಲಿದ್ದು ನಗರದ ವಿವಿಧೆಡೆ ಎರಡು ಗಂಟೆಗಳ ಕಾಲ ನಾಲ್ಕು ಗುಂಪುಗಳಲ್ಲಿ ಪಾದಯಾತ್ರೆ ನಡೆಯಲಿದೆ. ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯಲಿದ್ದು,ನಗದು ದಾನ ನೀಡುವವರಿಗೆ ರಶೀದಿಯನ್ನು ನೀಡಲಾಗುವುದು ಎಂದು ಸಚಿವರು ಹೇಳಿದರು.
ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣ: ನಗರದ ಪ್ರಮುಖ ರಸ್ತೆಗಳ ಕಾಮಗಾರಿ ಎರಡು ತಿಂಗಳೊಳಗೆ ಸಂಪೂರ್ಣಗೊಳಿಸಲಾಗುವುದು ಎಂದು ಹೇಳಿದ ಸಚಿವರು, ರಸ್ತೆ ಕಳಪೆ ಕಾಮಗಾರಿ ಪರಿಶೀಲನೆಗೆ 5 ಲ್ಯಾಬ್ ಗಳನ್ನು ಆರಂಭಿಸಲಾಗುವುದು.ಕಾಮಗಾರಿಯ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದ ಅವರು, ಪ್ರತೀ ತಾಲೂಕಿಗೆ ಒಂದರಂತೆ ಲ್ಯಾಬ್ ಗಳನ್ನು ಆರಂಭಿಸಲಾಗುವುದು. ಮಂಗಳೂರಿನಲ್ಲಿ ಮಾಸ್ಟರ್ ಲ್ಯಾಬ್ ಆರಂಭಿಸಲಾಗುವುದು ಎಂದು ನುಡಿದರು. ಅಕ್ಟೋಬರ್ ಒಳಗಾಗಿ ಉಡುಪಿ, ಮಡಿಕೇರಿಯಲ್ಲೂ ರಸ್ತೆ ಗುಣಮಟ್ಟ ಪರಿಶೀಲನೆಗೆ ಲ್ಯಾಬ್ ಗಳನ್ನು ಆರಂಭಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಡಿ ವಿ ಸದಾನಂದ ಗೌಡ ಅವರು, ರಾಜ್ಯದಲ್ಲಿ ಸಂಭವಿಸಿದ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಗೃಹಸಚಿವರಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನಿರಿಸಲಾಗಿದ್ದು, ತುರ್ತು ಮಧ್ಯಂತರ ಪರಿಹಾರ ಹತ್ತು ಸಾವಿರ ಕೋಟಿ ರೂ., ಆದಷ್ಟು ಶೀಘ್ರ ನೆರೆ ಪೀಡಿತ ಪ್ರದೇಶಗಳ ಸಮೀಕ್ಷೆ ಹಾಗೂ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಬೇಡಿಕೆ ಮಂಡಿಸಲಾಗಿದೆ ಎಂದು ಹೇಳಿದರು.
ಇದುವರೆಗೆ 192 ಜೀವಹಾನಿ,4,600ಜಾನುವಾರು ನಷ್ಟ, 2,04270 ಮನೆಗಳು ಸಂಪೂರ್ಣ ಹಾಳಾಗಿದ್ದು, 25ಲಕ್ಷ ಹೆಕ್ಟರ್ ಭೂಮಿ ಪ್ರವಾಹದಿಂದ ನಾಶವಾಗಿದೆ. ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 2,211 ರಿಲೀಫ್ ಕ್ಯಾಂಪ್ ಗಳು, 3,55,769ಪ್ರವಾಹಪೀಡಿತರಿಗೆ ಆಹಾರ,ವಸತಿ ಸೌಲಭ್ಯ ಒದಗಿಸಲಾಗಿದೆ.12 ಹೆಲಿಕಾಪ್ಟರ್, ಎನ್ ಡಿ ಆರ್ ನ 220 ಜವಾನರು,329 ದೋಣಿಗಳನ್ನು ಬಳಸಲಾಗಿದೆ.ಪ್ರಾಥಮಿಕ ಅಂದಾಜು ನಷ್ಟ 16,500 ಕೋಟಿ ಎನ್ನಲಾಗಿದ್ದು,ಐದು ಸಾವಿರ ಕೋಟಿ ರಸ್ತೆ ಹಾಗೂ ಸೇತುವೆ ಹಾನಿ,ಒಂದು ಸಾವಿರ ಕೋಟಿ ಮನೆ, ಬೆಳೆ ಹಾನಿ 2,500 ಕೋಟಿ, ಒಂದು ಸಾವಿರ ಕೋಟಿ ಇಲೆಕ್ಟ್ರಿಕಲ್ ಡ್ಯಾಮೇಜ್, ಮೂಲಭೂತ ಸೌಕರ್ಯ ಒಂದೂವರೆ ಸಾವಿರ ಕೋಟಿ ಹಾಗೂ ಇತರೆ ಹಾನಿ ಒಂದು ಸಾವಿರ ಕೋಟಿ, ಮೂರುವರೆ ಸಾವಿರ ಕೋಟಿ ನೀರಾವರಿ ಸೌಲಭ್ಯಗಳಲ್ಲಿ ಹಾನಿ ಎಂದು ಅಂದಾಜಿಸಲಾಗಿದೆ ಎಂದು ಸಂಸದರು ವಿವರಿಸಿದರು. ಸಂಘಸಂಸ್ಥೆಗಳು,ಮಠಗಳು ಸಹಕಾರದ ಭರವಸೆ ಹಾಗೂ ಮನೆ ನಿರ್ಮಾಣಕ್ಕೆ ನೆರವಾಗಲಿದೆ ಎಂದು ತಿಳಿಸಿದ ಅವರು, ಎಲ್ಲಾ ಸಚಿವರು, ಸಂಸದರ ಒಂದು ತಿಂಗಳ ವೇತನ ಪರಿಹಾರವಾಗಿ ನೀಡಬೇಕೆಂದು ಸುತ್ತೋಲೆಯನ್ನು ಕಳುಹಿಸಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಜಿಲ್ಲಾಧಿಕಾರಿ ಪೊನ್ನುರಾಜ್ ಉಪಸ್ಥಿತರಿದ್ದರು.