Wednesday, October 7, 2009

ಮಂಗಳೂರಿನಿಂದ ಹಜ್ ಯಾತ್ರೆಗೆ 6 ವಿಶೇಷ ವಿಮಾನಗಳು

ಮಂಗಳೂರು,ಅ.7:ಅಕ್ಟೋಬರ್ 25 ರಿಂದ ಮಂಗಳೂರಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳಲು ವಿವಿಧ ದಿನಾಂಕಗಳಂದು 6 ನೇರ ವಿಮಾನ ಯಾನಗಳನ್ನು ಆರಂಭಿಸಲಾಗಿದ್ದು, ನಾಲ್ಕು ಜಿಲ್ಲೆಗಳ 700 ಯಾತ್ರಿಕರು ಇಲ್ಲಿಂದ ನೇರ ಸಂಪರ್ಕದ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ಹಜ್,ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ.ಮುಮ್ತಾಜ್ ಆಲಿ ಖಾನ್ ತಿಳಿಸಿದರು.
ಇಂದು ನಗರದ ಯೆನಪೋಯಾ ಆಸ್ಪತ್ರೆಯಲ್ಲಿ ಹಜ್ ಯಾತ್ರಿಕರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಮಡಿಕೇರಿಯ ಹಜ್ ಯಾತ್ರಿಗಳು ನೇರ ವಿಮಾನ ಯಾನದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದ್ದು,ಅ.23ರಿಂದ ಬಜಪೆಯಲ್ಲಿ ಈ ಸಂಬಂಧ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಥಮ ಪ್ರಯೋಗದಲ್ಲಿ ನ್ಯೂನತೆಗಳಿದ್ದರೂ ಅದಕ್ಕೆ ಪ್ರಾಧನ್ಯತೆ ನೀಡದೆ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ವಿದ್ಯಾವಂತರು ಹೆಚ್ಚಿರುವ ಮಂಗಳೂರು ನಗರದಲ್ಲಿ ಹಿಂಸೆ,ಅಶಾಂತಿಗೆ ಅವಕಾಶವಿರಬಾರದು ಎಂದು ಹೇಳಿದ ಅವರು ಸಮಾಜವನ್ನು ವಿಭಾಗಿಸುವ ಭಾವನೆಯನ್ನು ತೊರೆದು ಪ್ರತಿಯೊಬ್ಬರು ಭಾರತೀಯತೆಯನ್ನು ಬೆಳೆಸಿಕೊಳ್ಳಬೇಕು;ಮಾನವ ಧರ್ಮ ಶಾಶ್ವತ ಎಂಬುದನ್ನು ಎಲ್ಲರೂ ಮನಗಾಣಬೇಕು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಹಜ್ ಯಾತ್ರಿಕರ ಅನುಕೂಲಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದರಲ್ಲದೆ, ನೇರ ವಿಮಾನದಲ್ಲಿ ಜಿಲ್ಲೆಯ 700 ಜನರು ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳಬಹುದಲ್ಲದೆ ಕರ್ನಾಟಕದಿಂದ 6,000 ಮತ್ತು ದೇಶದಿಂದ 1,42,000 ಜನರು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಸರ್ಕಾರ ಈಗಾಗಲೇ ಉರುಸ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾಕ್ಕೆ ಒಂದು ಕೋಟಿ ರೂ.ಗಳನ್ನು ನೀಡಿದ್ದು ಹಜ್ ಯಾತ್ರಿಕರಿಗೆ ಸಬ್ಸಿಡಿಯಾಗಿ 18,000ರೂ.ಗಳನ್ನು ಸರ್ಕಾರ ನೀಡುತ್ತಿದೆ ಎಂದರು. ಸಮಾರಂಭದಲ್ಲಿ ಶಾಸಕರಾದ ಯೋಗೀಶ್ ಭಟ್,ಹಜ್ ಸಮಿತಿ ಅಧ್ಯಕ್ಷ ಮಹಮದ್ ಗೌಸ್,ಸದಸ್ಯರಾದ ಸಲೀಂ ಅಂಬಾಗಿಲು, ಇಕ್ಬಾಲ್, ಮಾಜಿ ಸಚಿವರಾದ ಬಿ.ಎ.ಮೊಯ್ದಿನ್, ಅಲ್ಸಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಪಿ.ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಸಲೀಂ, ಬಿಜೆಪಿ ಉಪಾಧ್ಯಕ್ಷ ಅನ್ವರ್ ಮಾಣಿಪ್ಪಾಡಿ,ಹಜ್ ಕಮಿಟಿ ಇಒ ನಿಯಾಝ್ ಅಹಮದ್, ಮತ್ತಿರರು ಉಪಸ್ಥಿತರಿದ್ದರು.ಯೆನೊಪೋಯ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಹಾಜಿ ವೈ.ಮೊಹಮ್ಮದ್ ಕುಂಞಿ ಸ್ವಾಗತಿಸಿದರು. ಅಝೀಝ್ ಬೈಕಂಪಾಡಿ ವಂದಿಸಿದರು.