Wednesday, October 2, 2013

ಗಾಂಧೀವಾದದಿಂದ ದೇಶದ ಅಭಿವೃದ್ಧಿ: ನಾಮದೇವ ಶೆಣೈ

ಮಂಗಳೂರು,ಅಕ್ಟೋಬರ್ 2:- ಆತ್ಮಜ್ಞಾನ ಮತ್ತು ವಿಜ್ಞಾನ ಸೇರಿದರೆ ಸರ್ವೋದಯ. ದೇಶದ ಅಭಿವೃದ್ಧಿ ಗ್ರಾಮಸ್ವರಾಜ್ಯದಲ್ಲಿದೆ. ನಮ್ಮ ಗ್ರಾಮಗಳಿನ್ನೂ ಸ್ವರಾಜ್ಯದ ಬೆಳಕನ್ನು ಕಂಡಿಲ್ಲ ಎಂದು ಹಿರಿಯ ಸ್ವಾತಂತ್ರ್ಯಹೋರಾಟಗಾರ ಹಾಗೂ 'ಬದಿಯಡ್ಕ ಗಾಂಧಿ' ಎಂದೇ ಹೆಸರಾಗಿರುವ  ನಾಮದೇವ ಶೆಣೈ ಅವರು ಹೇಳಿದರು.
ವಾರ್ತಾ ಇಲಾಖೆ ದಕ್ಷಿಣಕನ್ನಡ, ಗ್ರಾಮ ಪಂಚಾಯತ್ ಬಾಳೆಪುಣಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತಾಶ್ರಯದಲ್ಲಿ 'ಗಾಂಧೀಜಿ ಮತ್ತು ಗ್ರಾಮ ಸ್ವರಾಜ್ಯ' ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂಸೆಯ ಇಂದಿನ ದಿನಗಳಲ್ಲಿ ಗಾಂದೀವಾದ ಮತ್ತು ಅಹಿಂಸೆ ಹೆಚ್ಚು ಪ್ರಸ್ತುತವಾಗಿದ್ದು ಅಭಿವೃದ್ಧಿಗೂ ಗಾಂಧಿಯವರ ಗ್ರಾಮಸ್ವರಾಜ್ಯವೇ ಕಾರಣವಾಗಲಿದೆ. ಚೀನಾದಂತಹ ಕಮ್ಯುನಿಸ್ಟ್ ದೇಶದಲ್ಲೂ ಗಾಂಧಿ ಸ್ಥಾನ ಪಡೆದಿದ್ದು ನಮ್ಮಲ್ಲಿ ಯುವಜನರು ಗಾಂಧಿಯನ್ನು ಮರೆಯುತ್ತಿದ್ದಾರೆ. ಪಠ್ಯ ಪುಸ್ತಕಗಳಲ್ಲಿ, ಶಾಲೆಗಳಲ್ಲಿ ಗಾಂಧೀಜಿಯ ಸರ್ವೋದಯ, ಅಹಿಂಸವಾದಗಳು ಪರಿಚಯವಾಗಬೇಕಿದೆ. ಜಗಕ್ಕೆ ಶಾಂತಿ ಮಂತ್ರ ನೀಡಿದ ಗಾಂಧಿಯವರು ನಮಗಿಂದು ಅನಿವಾರ್ಯ ಎಂದರು.
ತಮ್ಮ ಸ್ವಾತಂತ್ರ್ಯ ಹೋರಾಟದ ದಿನಗಳು, 1942ರಲ್ಲಿ ಭಾರತ ಬಿಟ್ಟು ತೊಲಗಿ ಘೋಷಣೆಯ ಸಂದರ್ಭದಲ್ಲಿ ನಡೆದ ಅಹಿಂಸಾ ಹೋರಾಟದ ವೇಳೆ ಎರಡೂವರೆ ವರ್ಷ ಬಳ್ಳಾರಿಯಲ್ಲಿ ಸೆರೆಮನೆಯಲ್ಲಿ ಕಳೆದ ದಿನಗಳು, ವಿನೋಬಬಾವೆಯವರ ಒಡನಾಟದ ದಿನಗಳನ್ನು ಸ್ಮರಿಸಿಕೊಂಡ ಹಿರಿಯ ಗಾಂಧೀವಾದಿಗಳು, ಮಕ್ಕಳಿಗೆ ನಿರರ್ಗಳ ಒಂದು ಗಾಂಟೆ ಕಾಲ ಸರ್ವಧರ್ಮ ಭಜನ್ ಗೀತೆಗಳನ್ನು ಹೇಳಿಕೊಟ್ಟರು.
ಇದೇ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಇಳಂತಿಲದ ಮದ್ಯಮುಕ್ತ ಕೂಸಪ್ಪ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಡಿಯುವ ಚಟಕ್ಕೆ ಗುರಿಯಾದವನಿಗೆ ವಿನಾಶವಲ್ಲದೆ ಬೇರೆ ದಾರಿ ಇಲ್ಲ ಎಂದರು. ತಾವು ಕುಡಿತವನ್ನು ಆರಂಭಿಸಿದ ದಿನಗಳು, ಚಟಕ್ಕೆ ದಾಸರಾದ ದಿನಗಳು, ಬಳಿಕ ಮದ್ಯವರ್ಜನ ಶಿಬಿರದಲ್ಲಿ ಸೇರಿದ ಬಳಿಕ ಮದ್ಯಪಾನ ವರ್ಜಿಸಿ ಬದುಕು ಕಟ್ಟಿದ ದಿನಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.
ಅಧ್ಯಕ್ಷತೆಯನ್ನು ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಗಿರೀಶ್ ಬೆಳ್ಳೇರಿ ಮಾತನಾಡಿದರು. ಸಮಾರಂಭಕ್ಕೆ ಆಗಮಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ  ಸಂತೋಷ್ ಕುಮಾರ್ ರೈ ಅವರು ತಮ್ಮ ಬಾಳೆಪುಣಿ ಗ್ರಾಮಪಂಚಾಯಿತಿಯ ಕೊರಗ ಕಾಲನಿಯನ್ನು ಮಾದರಿಯಾಗಿಸುವ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ವಾರ್ತಾಧಿಕಾರಿ ಶ್ರೀಮತಿ ರೋಹಿಣಿ, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಪ್ರೊ. ವಿನೀತ ಕೆ ಸಮಾರಂಭದಲ್ಲಿದ್ದರು. ವಾರ್ತಾಇಲಾಖೆಯ ಫ್ರಾನ್ಸಿಸ್ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು. ಪಂಚಾಯಿತಿ ಪಿ ಡಿ ಒ ಉಗ್ಗಪ್ಪ ಮೂಲ್ಯ, ಕಾರ್ಯದರ್ಶಿ ನಳಿನಿ ಹಾಗೂ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.
ಕೆನರಾ ಕಾಲೇಜು, ಗೋಕರ್ಣನಾಥೇಶ್ವರ ಕಾಲೇಜು, ಶ್ರೀ ನಾರಾಯಣ ಗುರು ಕಾಲೇಜು, ರಥಬೀದಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಬಾಳೆಪುಣಿ ಪಂಚಾಯಿತಿ ಕೊರಗರ ಕಾಲನಿಯ ಒಂದು ರಸ್ತೆಯನ್ನು ಶ್ರಮದಾನದ ಮುಖಾಂತರ ಸ್ವಚ್ಛಗೊಳಿಸಿದರು.