Tuesday, October 1, 2013

ಹಿರಿಯರನ್ನು ಗೌರವಿಸಿ: ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ

ಮಂಗಳೂರು,ಅಕ್ಟೋಬರ್ 01: ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸದೆ ಗೌರವಿಸಿ ಕುಟುಂಬದೊಂದಿರಿಸಿ ಪೋಷಿಸಬೇಕು. ಆದರೆ ಇಂದಿನ ದಿನಗಳಲ್ಲಿ ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸತ್ತಿರುವುದು ದುರ್ದೈವ  ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಜೀವಿಶಾಸ್ತ್ರ, ಪರಿಸರ ಸಚಿವ ಬಿ. ರಮಾನಾಥ ರೈ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬಜ್ಜೋಡಿಯ  ಲಿಟ್ಲ್ ಸಿಸ್ಟರ್ ಆಫ್ ದಿ ಪುವರ್ ಸಂಸ್ಥೆಯಲ್ಲಿ  ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ-2013 ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ, ದ. ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಪೀಳಿಗೆ ಹಿರಿಯ ನಾಗರಿಕರ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಪ್ರಸಕ್ತ ಸರಕಾರವು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಸ್ಪಂದನೆ ನೀಡುತ್ತಿದೆ. ಹಲವಾರು ಯೋಜನೆಗಳು ಜಾರಿಯಲ್ಲಿವೆ.  ಹಿರಿಯ ನಾಗರಿಕರಿಗಾಗಿ  ಗುರುತು ಚೀಟಿ, ಬಸ್ ಪ್ರಯಾಣ ರಿಯಾಯಿತಿ, ಪಿಂಚಣಿ, ಸಂಧ್ಯಾ ಸುರಕ್ಷಾ ಮೊದಲಾದ ಯೋಜನೆಗಳ ಮೂಲಕ ಸರಕಾರ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆಯನ್ನು ಸರಳೀಕರಣಕ್ಕೆ ನೂತನ ಸರಕಾರ ಮುಂದಾಗಿದೆ ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ ಟಿ. ಜಿ. ಶೆಣೈ ವಹಿಸಿದ್ದರು.
ದ.ಕ.ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಪಕೀರ ಎಂ. ಮುಖ್ಯ ಅತಿಥಿಯಾಗಿದ್ದರು. ವಿಶ್ವಾಸ್ ಟ್ರಸ್ಟ್ನ ಕಾರ್ಯದರ್ಶಿ ಒಲಿಂಡಾ ಪಿರೇರಾ, ಲಿಟ್ಲ್ ಸಿಸ್ಟರ್ ಆಫ್ ದಿ ಪುವರ್ ಸಂಸ್ಥೆಯ ಸಿ. ಜೋಸ್ಲಿನ್ ಉಪಸ್ಥಿತರಿದ್ದರು.
ಮಂಗಳೂರು ಹಿರಿಯ ನಾಗರಿಕರ ಸಂಘದ ವತಿಯಿಂದ ಉಸ್ತುವಾರಿ ಸಚಿವರಿಗೆ ಈ ವೇಳೆ ಮನವಿ ಸಲ್ಲಿಸಲಾಯಿತು. ಹಿರಿಯ ನಾಗರಿಕರಿಗೆ ಆರಾಮ ಪ್ರಯಾಣ ಅವಶ್ಯವಿದ್ದು, ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಹಾಗೂ ಸ್ಲೀಪರ್ ಬಸ್ಗಳಲ್ಲಿ ಶೇ. 25ರ ರಿಯಾಯಿತಿ ದರ ನೀಡುವಲ್ಲಿ ಕ್ರಮ ಕೈಗೊಳ್ಳಬೇಕು, ಸಂಧ್ಯಾ ಸುರಕ್ಷಾ ಯೋಜನೆಯನ್ವಯ ಕೊಡುತ್ತಿರುವ 500 ರೂ.ಗಳ ಮಾಸಿಕ ಪಿಂಚಣಿಯನ್ನು 2 ಸಾವಿರ ರೂ.ಗಳಿಗೆ ಏರಿಸಬೇಕು. ಅಲ್ಲದೇ ಪಿಂಚಣಿ ಪಡೆಯುವವರ ವಯೋಮಿತಿಯನ್ನು 65ರಿಂದ 60ಕ್ಕೆ ಇಳಿಸಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗಟ್ರೂಡ್ ವೇಗಸ್ ಸ್ವಾಗತಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರಿಕಾ ಎಸ್. ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶರ್ಮಿಳಾ ವಿದ್ಯಾಸಾಗರ್ ಹಾಗೂ ಸಂದೀಪ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಹಿರಿಯ ನಾಗರಿಕರ ದಿನಾಚರಣೆಯ ಕುರಿತಂತೆ ಮಾತನಾಡಿದರು.