Saturday, January 7, 2012

ಎಂಆರ್ ಪಿಎಲ್ ಪೈಪ್ ಲೈನ್ ಅಳವಡಿಕೆ ವರದಿ ನಂತರ ಕ್ರಮ : ಜಿಲ್ಲಾಧಿಕಾರಿ

ಮಂಗಳೂರು,ಜನವರಿ.07:ಮಂಗಳೂರು ರಿಫೈನರೀಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನವವಮಂಗಳೂರು ಬಂದರು ಪ್ರದೇಶದಲ್ಲಿ ಅಳವಡಿಸುತ್ತಿರುವ ಪೈಪ್ ಲೈನ್ ಕಾಮಗಾರಿಗೆ ಮೀನುಗಾರ ಸಂಘದವರು ಆಕ್ಷೇಪ ವ್ಯಕ್ತ ಪಡಿಸಿರುವುದರಿಂದ ಮೀನುಗಾರರ ಸಂಘದ ಪದಾಧಿಕಾರಿಗಳು ಕೊಚ್ಚಿನ್ಗೆ ತೆರಳಿ ಅಲ್ಲಿ ಅಳವಡಿಸಿರುವ ಪೈಪ್ ಲೈನ್ ಸಮೀಕ್ಷೆ ನಡೆಸಿ ವರದಿ ನೀಡಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಎಂಆರ್ ಪಿಎಲ್ ಮತ್ತು ಮೀನುಗಾರರ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಇಬ್ಬರ ಹೇಳಿಕೆಗಳನ್ನು ಆಲಿಸಿ ನಂತರ ಮೇಲಿನಂತೆ ತಿಳಿಸಿದರು.ಪೈಪ್ ಲೈನ್ ನ್ನು ಅಳವಡಿಸುವಾಗ 3 ಮೀಟರ್ ಸಮುದ್ರದಲ್ಲಿ ಆಳಕ್ಕೆ ಅಳವಡಿಸಿದಲ್ಲಿ ಸಣ್ಣ ಬೋಟು ಹೊಂದಿರುವವರಿಗೆ ತೊಂದರೆಯಾಗುವುದಿಲ್ಲ.ಆದ್ದರಿಂದ ಈ ಬಗ್ಗೆ ಪ್ರಾಯೋಗಿಕವಾಗಿ ಪೈಪ್ ನ್ನು ಅಳವಡಿಸಿ ಸಾಧಕಬಾಧಕಗಳನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಲ್ಲಿಯವರೆಗೂ ಎಂಆರ್ ಪಿ ಎಲ್ ನವರು ಪೈಪ್ ಲೈನ್ ಅಳವಡಿಕೆ ಕಾರ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ಎಂಆರ್ ಪಿಎಲ್ನವರಿಗೆ ಸೂಚಿಸಿರುತ್ತಾರೆ.
ಸಭೆಯಲ್ಲಿ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಾದ ಸುರೇಶ್ ಕುಮಾರ್ ಎಂಆರ್ ಪಿಎಲ್ ನಿರ್ದೇಶಕರಾದ ಉಪಾಧ್ಯಾಯ, ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.