ಮಂಗಳೂರು,ಜನವರಿ.23: ಈ ಬಾರಿಯ ಬಜೆಟ್ ನಲ್ಲಿ ತೋಟಗಾರಿಕೆ ಇಲಾಖೆಗಾಗಿ 2 ಸಾವಿರ ಕೋಟಿ ಅನುದಾನವನ್ನು ಮೀಸಲಿಡುವಂತೆ ಬೇಡಿಕೆ ಇಡಲಾಗಿದೆ ಎಂದು ರಾಜ್ಯ ತೋಟಗಾರಿಕಾ ಸಚಿವ ಎಸ್.ಎ.ರವೀಂದ್ರನಾಥ್ ಹೇಳಿದ್ದಾರೆ.ಇಂದು ಮಂಗಳೂರಿಗೆ ಆಗಮಿಸಿದ ಸಚಿವರು ನಗರದ ಕದ್ರಿ ಉದ್ಯಾನವನಕ್ಕೆ ಭೇಟಿ ನೀಡಿ ಉದ್ಯನವನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ಥಳಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕದ್ರಿ ಉದ್ಯಾನವನವನ್ನು ಸ್ಪೆಷಲ್ ಪ್ಯಾಕೇಜ್ ಮೂಲಕ ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ನುಡಿದರು.
ಈ ಸಂದರ್ಭ ಮಾತನಾಡಿದ ರಾಜ್ಯ ವಿಧಾನಸಭಾ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್,ಕದ್ರಿ ಪಾರ್ಕ್ ಒಂದು ಮಾದರಿ ಉದ್ಯಾನವನ ಆಗಿ ನಿರ್ಮಾಣಗೊಳ್ಳುವ ಮೂಲಕ `ಸ್ವರ್ಣ ಪಾರ್ಕ್' ಎಂದು ಗುರುತಿಸಿಕೊಳ್ಳುವಂತಾಗಬೇಕು. ಬೆಂಗಳೂರಿನ ಲಾಲ್ ಭಾಗ್ ಮಾದರಿಯಲ್ಲಿ ಇದರ ರಚನೆಯಾಗಬೇಕು. ಕದ್ರಿ ಉದ್ಯಾನವನವನ್ನು ರೂ.5 ಕೋಟಿ ವಿಶೇಷ ಪ್ಯಾಕೇಜ್ ಮೂಲಕ ಅಭಿವೃದ್ಧಿಪಡಿಸುವಂತೆ ಸರಕಾರದ ಮುಂದೆ ಈಗಾಗಲೇ ಬೇಡಿಕೆ ಇಡಲಾಗಿದ್ದು, ಈಗಾಗಲೇ ಹಣ ಬಿಡುಗಡೆಗಾಗಿ ತೋಟಗಾರಿಕೆ ಇಲಾಖೆ ಮೂಲಕ ಶಿಫಾರಸು ಮಾಡಿ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ.ಸಚಿವರು ತಕ್ಷಣ ಈ ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೂ.5 ಕೋಟಿ ಹಣ ಬಿಡುಗಡೆ ಯಾದಲ್ಲಿ ಕದ್ರಿ ಪಾರ್ಕಿಗೆ ಹೊಸ ಆಕರ್ಷಣೆ ಬರಲಿದೆ. 1.60 ಕೋಟಿ ವೆಚ್ಚದಲ್ಲಿ ಸಾಫ್ಟ್ ಲ್ಯಾಂಡ್ ಸ್ಕೇಪಿಂಗ್, ರೂ.1 ಕೋಟಿಯಲ್ಲಿ ಅಲ್ಟ್ರಾ ಬಾರ್ ಯುರೊ ಟೈಲ್ಸ್ ಅಳವಡಿಕೆ, ಆರ್ನ ಮೆಂಟಲ್ ಸೆಕ್ಯುರಿಟಿ ಗ್ರಿಲ್ ಅಳವ ಡಿಕೆಗೆ ರೂ.66 ಲಕ್ಷ, ರೂ.8 ಲಕ್ಷ ವೆಚ್ಚದಲ್ಲಿ ತಡೆ ಗೋಡೆ ನಿರ್ಮಾಣ, ನೀರು ಸಂಗ್ರಹಣಾ ತೊಟ್ಟಿಗೆ ರೂ.31 ಲಕ್ಷ, ಸಣ್ಣ ಮನೆಗಳ ನಿರ್ಮಾಣಕ್ಕೆ ರೂ.23 ಲಕ್ಷ, ಒಳ ಚರಂಡಿ ವ್ಯವಸ್ಥೆಗೆ ರೂ.7 ಲಕ್ಷ, ವಿದ್ಯುದ್ದೀಪಗಳ ಅಳವಡಿಕೆಗೆ ರೂ.50ಲಕ್ಷ, ಸ್ಪ್ರಿಂಕ್ಲಿಂಗ್ ವ್ಯವಸ್ಥೆಗೆ ರೂ.20 ಲಕ್ಷ, ಹೀಗೆ ವಿವಿಧ ನೆಲೆಯಲ್ಲಿ ಹಣವನ್ನು ವಿಂಗಡಿಸಿ ಉದ್ಯಾನವನದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಅಲ್ಲದೆ ಮಕ್ಕಳ ಆಟೋಟ ಚಟುವಟಿಕೆಗಳಿಗೆ ವ್ಯವಸ್ಥೆ, ಉದ್ಯಾನವನದಲ್ಲಿ ಬೊನ್ಸಾಯಿ ಗಿಡ ಬೆಳೆಸುವಿಕೆ, ಮೆಡಿಟೇಶನ್ ಸೆಂಟರ್ ನಿರ್ಮಾಣ, ಹಿರಿಯ ನಾಗರಿಕರಿಗೆ ನಡೆದಾಡಲು ಅನುಕೂಲವಾಗುವ ವ್ಯವಸ್ಥೆ ಸೇರಿ ಮಾದರಿ ಆಗುವ ರೀತಿಯಲ್ಲಿ ಕಾರ್ಯ ಯೋಜನೆ ಸಿದ್ದಗೊಂಡಿದೆ ಎಂದು ಯೋಗೀಶ್ ಭಟ್ ವಿವರಿಸಿದರು.ಯೋಗಿಶ್ ಭಟ್ ರ ಮನವಿಗೆ ಸ್ಪಂದಿಸಿದ ಸಚಿವರು ಕದ್ರಿ ಉದ್ಯಾನವದ ಅಭಿವೃದ್ಧಿಗೆ ಬೇಕಾದ ಹಣವನ್ನು ಶೀಘ್ರ ಬಿಡುಗಡೆ ಮಾಡಲು ಆದ್ಯತೆ ನೀಡುವುದಾಗಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತಿತರ ಕಡೆ ಕಂಡು ಬಂದ ಅಡಿಕೆ ಕೊಳೆರೋಗ ಬಾಧೆಗೆ ಸಂಬಂಧಿಸಿ ಒಟ್ಟು 21,174 ಅರ್ಜಿಗಳು ಬಂದಿವೆ.ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಪರಿಶೀಲನೆ ನಡೆಸಿ ಕೊಳೆರೋಗದಿಂದ 1.74 ಕೋಟಿ ನಷ್ಟ ಸಂಭವಿಸಿದೆ ಎಂಬ ಮಾಹಿತಿಯನ್ನು ಇಲಾಖಾ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.