ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರಿನಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವ 2012ಜನವರಿ 12ರಿಂದ 16ರ ತನಕ ನಡೆಯಲಿದ್ದು ಉದ್ಘಾಟನಾ ಸಮಾರಂಭದಲ್ಲಿ "ಸಾಂಸ್ಕೃತಿಕ ಪಥ ಸಂಚಲನ" ಪ್ರಮುಖ ಆಕರ್ಷಣೆಯಾಗಿ ಮೂಡಿಬರಲಿವೆ. ಮೂಡಬಿದಿರೆಯ ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ಪರಿಕಲ್ಪನೆಯಂತೆ ಉದ್ಘಾಟನಾ ಸಮಾರಂಭಕ್ಕೆ ಪೂರ್ವಭಾವಿಯಾಗಿ ಬೃಹತ್ ಸಾಂಸ್ಕೃತಿಕ ಮೆರವಣಿಗೆ ಹಾಗೂ ಸಾಂಸ್ಕೃತಿಕ ಪಥಸಂಚಲನ ಮೂಡಿಬರಲಿವೆ.
ಭಾರತ ಸರಕಾರ, ಕರ್ನಾಟಕ ಸರಕಾರ , ನೆಹರು ಯುವಕೇಂದ್ರ ಸಂಘಟನೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇದರ ಸಂಯುಕ್ತಾಶ್ರಯದಲ್ಲಿ ಈ ಯುವಜನೋತ್ಸವ ನಡೆಯಲಿವೆ.ಕಳೆದ ವರ್ಷ ರಾಜಸ್ಥಾನದ ಉದಯ ಪುರದಲ್ಲಿ ಈ ಯುವಜನೋತ್ಸವ ಕಾರ್ಯಕ್ರಮ ನಡೆದಿತ್ತು. ಉದ್ಘಾಟನಾ ಸಮಾರಂಭ ಜನವರಿ 12ರಂದು ನಡೆಯಲಿದ್ದು ಪೂರ್ವಭಾವಿಯಾಗಿ ಅದ್ಧೂರಿ ಸಾಂಸ್ಕೃತಿಕ ಮೆರವಣಿಗೆ ನಡೆಯಲಿವೆ.
ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸುಮಾರು 50ಕ್ಕೂ ಅಧಿಕ ತಂಡಗಳು ಭಾಗವಹಿಸಲಿದ್ದು, ಕರ್ನಾಟಕದ ವಿವಿಧ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸುವ ಬೃಹತ್ ಸಾಂಸ್ಕೃತಿಕ ಮೆರವಣಿಗೆಯಾಗಿ ಮೂಡಿಬರಲಿವೆ. ಮೆರವಣಿಗೆ ನಗರದ ನೆಹರೂ ಮೈದಾನದಿಂದ 3ಗಂಟೆಗೆ ಸರಿಯಾಗಿ ಪ್ರಾರಂಭಗೊಂಡು ಹಂಪನಕಟ್ಟೆ ಮೂಲಕ ಕೆ.ಎಸ್.ರಾವ್ ರಸ್ತೆಯಲ್ಲಿ ಸಾಗಿ ಪಿ.ವಿ.ಎಸ್ ಸರ್ಕಲ್ ಮೂಲಕ ಬಲ್ಲಾಳ್ ಬಾಗ್ ಪ್ರವೇಶಿಸಿ ನಂತರ ಮಂಗಳಾ ಕ್ರೀಡಾಂಗಣ ಪ್ರವೇಶಿಸಲಿದೆ. ದೇಶದ ವಿವಿಧೆಡೆಗಳಿಂದ ಆಗಮಿಸಿದ ಪ್ರಮುಖರು, ಕಲಾಸಕ್ತರನ್ನೊಳಗೊಂಡ ತಂಡಗಳೊಂದಿಗೆ ಮಂಗಳಾ ಕ್ರೀಡಾಂಗಣದ ಒಳಭಾಗದಲ್ಲಿ "ಸಾಂಸ್ಕೃತಿಕ ಪಥ ಸಂಚಲನ" ನಡೆಯಲಿವೆ.
17ರ ಆಕರ್ಷಣೆ
ಸಾಂಸ್ಕೃತಿಕ ಮೆರವಣಿಗೆಯಲ್ಲಿ "17" ಸಂಖ್ಯೆಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ತಂಡಗಳಲ್ಲಿ 17ಹಾಗೂ ಅದಕ್ಕಿಂತ ಮೇಲ್ಪಟ್ಟು ಅಧಿಕ ಸಂಖ್ಯೆಯಲ್ಲಿ ಕಲಾವಿದರನ್ನು ಬಳಸಿಕೊಳ್ಳಲಾಗುವುದು ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲೂ 17 "ಕದೋನಿ" ತೋಪುಗಳನ್ನು ಸಿಡಿಸಲಾಗುವುದು. ತ್ರಿವರ್ಣಧ್ವಜದೊಂದಿಗೆ 600 ಮಂದಿ ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ.