ಮಂಗಳೂರು,ಏಪ್ರಿಲ್.04:ಪ್ರತಿವರ್ಷ ಶೇ.10ರಷ್ಟು ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ, ಹೆಚ್ಚುತ್ತಿರುವ ಬೇಡಿಕೆಗನುಸಾರವಾಗಿ ವಿದ್ಯುತ್ ದರಗಳನ್ನು ಪರಿಷ್ಕರಿಸಬೇಕಾಗುತ್ತದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷರಾದ ಎಮ್.ಆರ. ಶ್ರೀನಿವಾಸಮೂರ್ತಿ ಅವರು ತಿಳಿಸಿದ್ದಾರೆ.
ಅವರು ಮಂಗಳವಾರ ದ.ಕ.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಿದ್ದ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿ ಮಾತನಾಡಿದರು. ಈ ದಿನ ಸಭೆಗೆ ಉಡುಪಿ ಜಿಲ್ಲೆಯಿಂದ ಹೆಚ್ಚು 1500 ವಿದ್ಯುತ್ ದರ ಏರಿಸುವ ವಿರುದ್ದ ಆಕ್ಷೆಪಣೆಗಳು ಬಂದಿದೆ, ಉಳಿದಂತೆ ದ.ಕ.ಜಿಲ್ಲೆ ಹಾಗೂ ಇತರೆಡೆಗಳಿಂದ 1000ಕ್ಕೂ ಹೆಚ್ಚು ಆಕ್ಷೆಪಣೆಗಳು ಬಂದಿವೆ ಎಂದರು.ರಾಜ್ಯದಲ್ಲಿ ಗ್ರಾಮಾಂತರ ಪ್ರದೇಶದ ಜನರಿಗೆ ಅನು ಕೂಲ ವಾಗು ವಂತೆ ನಿತ್ಯ ಸಂಜೆ 6-00 ಗಂಟೆಯಿಂದ ಬೆಳಿಗ್ಗೆ 6-00 ಗಂಟೆಯ ವರೆಗೆ ವಿದ್ಯುತ್ ಸರಬರಾಜು ಮಾಡುವಂತೆ ಆಯೋಗ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ, ಅದರಂತೆ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಆಗಬೇಕು, ಒಂದು ವೇಳೆ ಇದರಲ್ಲಿ ಲೋಪವಾಗಿದ್ದಲ್ಲಿ ಆಯೋಗದ ಗಮನಕ್ಕೆ ತಂದಲ್ಲಿ ಸರಿಪಡಿಸುವುದಾಗಿ ತಿಳಿಸಿದರು. ರೈತರು, ಗೃಹಬಳಕೆದಾರರು ವಿದ್ಯುತ್ ಸಂಪರ್ಕ ಪಡೆಯುವಾಗ ಮೆಸ್ಕಾಂನಿಂದ ಒದಗಿಸುವ ಸಾಮಗ್ರಿಗಳು, ಹಾಗೂ ಬಳಕೆದಾರರೇ ಖರೀದಿಸಿ ತರಬೇಕಾದ ಸಾಮಗ್ರಿಗಳ ಮುದ್ರಿತ ಪಟ್ಟಿಯನ್ನು ಸಂಪರ್ಕ ಪಡೆಯುವವರಿಗೆ ನೀಡುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವಿಜಯನರಸಿಂಹ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಆಯೋಗದ ಗೌರವಾನ್ವಿತ ಸದಸ್ಯರಾದ ವಿಶ್ವನಾಥ ಹಿರೆಮಠ ಮತ್ತು ಶ್ರೀನಿವಾಸರಾವ್ ಅವರು ಸೇರಿದಂತೆ ಚೇಂಬರ್ ಅಫ್ ಕಾಮರ್ಸ್ ಪದಾಧಿಕಾರಿಗಳು, ಕೈಗಾರಿಕೋಧ್ಯಮಿಗಳು, ರೈತ ಸಂಘಗಳ ಮುಖಂಡರು ಸಾರ್ವಜನಿಕರು ಮುಂತಾದವರು ಭಾಗವಹಿಸಿದ್ದರು.