ಮಂಗಳೂರು,ಏಪ್ರಿಲ್.16:2011-12ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ (ಎನ್ ಆರ್ ಡಿ ಪಿ) ಕಾರ್ಯಕ್ರಮದಡಿ ಜಿಲ್ಲಾ ಪಂಚಾಯತ್ಗೆ ಕುಡಿಯುವ ನೀರಿನ ಯೋಜನೆಗಳಿಗೆ ಬಿಡುಗಡೆಯಾಗಿದ್ದ 39.17 ಕೋಟಿ ರೂ.ಗಳಲ್ಲಿ 39.06 ಕೋಟಿ ರೂ. ಗಳನ್ನು ಯೋಜನಾ ಅನುಷ್ಠಾನಗಳಿಗೆ ವ್ಯಯ ಮಾಡಲಾಗಿದೆ.ಇಂದು ಜಿಲ್ಲಾ ಪಂಚಾಯತ್ ನಲ್ಲಿ ಅಧ್ಯಕ್ಷ ರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕೆಡಿಪಿ ಸಭೆಗೆ ಪಂಚಾ ಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶ್ರೀ ಸತ್ಯ ನಾರಾಯಣ ಅವರು ಈ ಮಾಹಿತಿಯನ್ನು ನೀಡಿದರು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ (ಎನ್ ಆರ್ ಡಿ ಪಿ)ಯಡಿ ಒಟ್ಟು 1,442 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 39.17 ಕೋಟಿ ರೂ. ಅನುದಾನ ಬಂದಿತ್ತು. ಪೈಪ್ ವಾಟರ್ ಸಪ್ಲೈ ಸ್ಕೀಮ್, ಮಿನಿ ವಾಟರ್ ಸಪ್ಲೈ ಸ್ಕೀಮ್, ಸ್ಕೂಲ್ ವಾಟರ್ ಸಪ್ಲೈ ಸ್ಕೀಮ್ ಹಾಗೂ ಜಲಮೂಲ ನಿರಂತರತೆ ಕಾಪಾಡುವಿಕೆ ಯೋಜನೆಯಡಿ ಬಿಡುಗಡೆ ಯಾದ ಎಲ್ಲಾ ಕಾಮಗಾರಿಗಳನ್ನು ಆರಂಭಿಸಲಾಗಿದೆ.
781 ಕಾಮಗಾರಿಗಳು ಮುಂದುವರಿದ ಕಾಮಗಾರಿ ಹಾಗೂ 681 ಹೊಸ ಕಾಮಗಾರಿಗಳಲ್ಲಿ 5 ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗಳಿಗೆ ಟೆಂಡರ್ ಕರೆದು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಜಲಮೂಲ ನಿರಂತರತೆ ಕಾಯ್ದು ಕೊಳ್ಳುವ ಯೋಜನೆಯಡಿಯಲ್ಲಿ 78 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಚೆಕ್ ಡ್ಯಾಮ್ ಮತ್ತು ವೆಂಟೆಡ್ ಡ್ಯಾಮ್ ಗಳು ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ ಎಂದರು.
ಬಂಟ್ವಾಳ ಮತ್ತು ಮಂಗಳೂರು ತಾಲೂಕು ಬೇಸಿಗೆಯ ದಿನಗಳಲ್ಲಿ ಹೆಚ್ಚಿನ ನೀರಿನ ಕ್ಷಾಮ ಎದುರಿಸುತ್ತಿದ್ದು ಜಿಲ್ಲೆಯ ಜಲಮೂಲಗಳಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ನೀರು ನಿರ್ವಹಣೆ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಅಸ್ಥೆ ವಹಿಸಿ ಸಮಗ್ರ, ಮಾದರಿ ಯೋಜನೆಗಳನ್ನು ನೀಡುವಂತಾಗಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು.
ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಇಒ ಗಳು ತಕ್ಷಣವೇ ಸ್ಪಂದಿಸಬೇಕು; ಮಾಧ್ಯಮಗಳ ವರದಿಗಳನ್ನು ನೋಡಿ ನೀರಿನ ಸಮಸ್ಯೆ ಬಗ್ಗೆ ಬಂದ ವರದಿಗಳು ಸಾರ್ವಜನಿಕರ ಸಮಸ್ಯೆಗಳೆಂಬುದನ್ನು ಅರ್ಥೈಸಿಕೊಂಡು ಸ್ಪಂದಿಸಬೇಕು ಎಂದು ಸೂಚಿಸಿದ ಸಿಇಒ ಅವರು, ಈಗಾಗಲೇ ಟಾಸ್ಕ್ ಫೋರ್ಸ್ ನಿಂದ ಬಿಡುಗಡೆ ಮಾಡಿರುವ ಹಣವನ್ನು ತುರ್ತು ನೀರು ಒದಗಿಸಲು ಉಪಯೋಗಿಸಿಕೊಳ್ಳಬೇಕೆಂದರು. ನೀರು ನಿರ್ವಹಣೆ ಮತ್ತು ಸಂಗ್ರಹಕ್ಕೆ ಭವಿಷ್ಯದಲ್ಲಿ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದರು.ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಗಳು ನಡೆಯುವ ವೇಳೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸಮನ್ವಯ ಸಾಧಿಸಿ ಕರ್ತವ್ಯ ನಿರ್ವ ಹಿಸು ವುದರಿಂದ ಪರೀಕ್ಷಾ ಹಾಲ್ ನಲ್ಲಿ ಪರೀಕ್ಷೆ ಬರೆಯುವ ವೇಳೆ ಅನಾ ರೋಗ್ಯ ಪೀಡಿತ ಮಕ್ಕಳಿಗೆ ತಕ್ಷಣ ವೈದ್ಯಕೀಯ ನೆರವು ನೀಡ ಬಹುದು ಎಂಬ ಅಂಶವನ್ನು ಇಲಾಖೆಗಳು ಮನಗಾಣ ಬೇಕೆಂದು ಇತ್ತೀಚೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಸಂದರ್ಭ ಲೇಡಿಹಿಲ್ ಶಾಲೆಯಲ್ಲಿ ನಡೆದ ಘಟನೆಯನ್ನು ಸಿಇಒ ಅವರು ಸಭೆಯ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ 6ರಿಂದ 14 ವರ್ಷದವರೆಗಿನ ದೈಹಿಕ ವಿಕಲಚೇತನ ಮಕ್ಕಳನ್ನು ಗುರುತಿಸ ಲಾಗಿದ್ದು, ಈ ಮಕ್ಕಳಿಗೆ ಸಹಕಾರ ಸಂಘಗಳ ಉಪನಿಬಂಧಕರ ಸಹಕಾರ ಹಾಗೂ ವಿಶೇಷ ಮುತುವರ್ಜಿಯಿಂದ ಎಲ್ಲ ಮಕ್ಕಳನ್ನು ದತ್ತು ಸ್ವೀಕರಿಸಿ ಅವರನ್ನು ಸಬಲೀಕರಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಇಂದು ಜಿಲ್ಲಾ ಪಂಚಾಯತ್ ನಲ್ಲಿ ಮಾಹಿತಿ ನೀಡಲು ವಿಫಲರಾದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸೂಚಿಸಿದರು.
ಹಲವು ಬಾರಿ ಈ ಕುರಿತು ಅಧಿಕಾರಿಗಳಿಗೆ ಮೌಖಿಕ ಎಚ್ಚರಿಕೆ ನೀಡಿದ್ದರೂ, ಮಾಹಿತಿ ಇಲ್ಲದೆ ಸಭೆಗೆ ಹಾಜರಾಗುವುದು, ಅಧಿಕಾರಿಗಳು ಗೈರು ಹಾಜರಾಗುವುದು ಮುಂದುವರಿದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದ ಅಧ್ಯಕ್ಷರು, ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಅಭಿವೃದ್ಧಿ ಕುರಿತ ಸಭೆಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದರು. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು ವಿಚಾರಿಸಿದಾಗ ಉತ್ತರ ನೀಡಬೇಕಾದ ಬದ್ಧತೆ ತನಗಿದೆ; ಹಾಗಾಗಿ ಅಭಿವೃದ್ಧಿ ಕಾರ್ಯಗಳ ಸಮಗ್ರ ಮಾಹಿತಿ ತನಗೆ ಅಗತ್ಯವಾಗಿದೆ ಬೇಕಿದೆ ಎಂದರು.
ಮುಂದಿನ ಸಭೆಯಲ್ಲಿ ಮಾಹಿತಿ ಇಲ್ಲದೆ ಬರುವ ಅಧಿಕಾರಿಗಳನ್ನು ನಿರ್ಧಾಕ್ಷಿಣ್ಯವಾಗಿ ಹೊರಗೆ ಕಳುಹಿಸಲಾಗುವುದು ಎಂದೂ ಅಧ್ಯಕ್ಷರು ಹೇಳಿದರು.
'ಸಕಾಲ' ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಕಾಲದ ಕುರಿತು ಸಮಗ್ರ ಮಾಹಿತಿಯೊಡನೆ ಸಭೆಗೆ ಹಾಜರಾಗಬೇಕು. ಮೊದಲಿಗೆ ಸಕಾಲದ ಮಾಹಿತಿಯನ್ನು ಸಭೆಗೆ ನೀಡಬೇಕೆಂದು ಸಿಇಒ ಅವರು ಹೇಳಿದರು.
ಇಂದಿರಾ ಆವಾಸ್ ಯೋಜನೆ ಪ್ರಗತಿ ಬಗ್ಗೆ, ಕೊರಗರ ಮನೆ ನೀಡುವ ಬಗ್ಗೆಗಿನ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅರ್ಹರಿಗೆ ಸೌಲಭ್ಯಗಳು ದೊರಕಬೇಕೆಂದರು.
ಎಲ್ಲ ಗ್ರಾಮಪಂಚಾಯತ್ ಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇಗೆ ಕೈಗೊಂಡಿರುವ ಕ್ರಮಗಳನ್ನು ತಕ್ಷಣವೇ ನೀಡಬೇಕೆಂದ ಸಿಇಒ ಅವರು ಲೋಕ್ ಅದಾಲತ್ ನಲ್ಲಿ ನಾವು ಉತ್ತರನೀಡಬೇಕಿದೆ. ತ್ಯಾಜ್ಯ ವಿಲೇಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಡಾ ಬಿ ಆರ್ ಅಂಬೇಡ್ಕರ್ ನಿಗಮವನ್ನೊಳಗೊಂಡಂತೆ ಒಟ್ಟು ನಾಲ್ಕು ನಿಗಮಗಳ ಸಭೆಯನ್ನು ತಕ್ಷಣವೇ ಕರೆದು ಪ್ರತ್ಯೇಕವಾಗಿ ಪ್ರಗತಿ ಪರಿಶೀಲನೆ ನಡೆಸುವುದಾಗಿ ಸಿಇಒ ಹೇಳಿದರು.
ಬಂಟ್ವಾಳದಲ್ಲಿ ಆರಂಭಿಸಲಾಗುವ ಆಡು ಸಾಕಾಣಿಕೆ ವಲಯ ರಾಜ್ಯಕ್ಕೆ ಮಾದರಿಯಾಗಬೇಕೆಂದ ಸಿಇಒ ಅವರು, ಇದಕ್ಕೆ ಪಶುಪಾಲನಾ ಇಲಾಖೆಯ ಸಂಪೂರ್ಣ ಸಹಕಾರ ಬೇಕೆಂದರು.
ಸಮಾಜ ಕಲ್ಯಾಣ ಇಲಾಖೆಗೋಸ್ಕರ ನಿರ್ಮಿತಿ ಇಲಾಖೆ ನಿರ್ಮಿಸುವ ಕಟ್ಟಡಗಳು ಸಮಯಮಿತಿಯೊಳಗೆ, ಗುಣಮಟ್ಟಕ್ಕೆ ಆದ್ಯತೆ ನೀಡಿ ನಿರ್ಮಾಣವಾಗಬೇಕೆಂದು ಸಿಇಒ ನಿರ್ಮಿತಿಯವರಿಗೆ ಸೂಚಿಸಿದರು.
12-13 ನೇ ಸಾಲಿನ ಜಿಲ್ಲಾ ಪಂಚಾಯತ್ ನ ಯೋಜನಾ ಕಾರ್ಯಕ್ರಮಗಳಿಗೆ 150.62 ಕೋಟಿ ರೂ. ಕ್ರಿಯಾಯೋಜನೆಗೆ ಮಂಜೂರಾತಿ ದೊರೆತಿದೆ. ಇದರಲ್ಲಿ 84.64ಕೋಟಿ ರಾಜ್ಯದ ಪಾಲು, 65.98 ಕೋಟಿ ಕೇಂದ್ರದ ಪಾಲು. ಕಳೆದ ಸಾಲಿಗಿಂತ 39.95 ಕೋಟಿ ರೂ. ಹೆಚ್ಚಿನ ಕ್ರಿಯಾಯೋಜನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಲಭ್ಯವಾಗಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನಗೌಡ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ನವೀನ್ ಕುಮಾರ್ ಮೇನಾಲ, ಮುಖ್ಯ ಯೋಜನಾಧಿಕಾರಿ ನಜೀರ್, ಯೋಜನಾ ನಿರ್ದೇಶಕರಾದ ಸೀತಮ್ಮ, ಉಪಕಾರ್ಯದರ್ಶಿ ಶಿವರಾಮೇಗೌಡ, ಮುಖ್ಯ ಲೆಕ್ಕಾಧಿಕಾರಿ ಶೇಕ್ ಲತೀಫ್ ಉಪಸ್ಥಿತರಿದ್ದರು.