ಮಂಗಳೂರು ,ಏಪ್ರಿಲ್.26 :ಯೋಜನಾ ವರದಿಗಳು ಸಲಹೆಗಳಿಗಿಂತ ಮುಖ್ಯವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಪೂರಕವಾಗಿರಬೇಕು ಎಂದು ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಹೇಳಿದರು.
ಇಂದು ಮಹಾ ನಗರ ಪಾಲಿಕೆ ಯಲ್ಲಿ ನಡೆದ ರಾಷ್ಟ್ರೀಯ ನಗರ ನೈರ್ಮ ಲೀಕರಣ ಯೋಜನಾ ವರದಿ ಯನ್ನು ಅಂತಿಮ ಗೊಳಿಸಲು ಮಹಾ ನಗರ ಪಾಲಿಕೆ ಮಹಾ ಪೌರರ ಅಧ್ಯಕ್ಷ ತೆಯಲ್ಲಿ ನಡೆದ ಸಭೆ ಯಲ್ಲಿ ಪಾಲಿಕೆ ಆಯುಕ್ತರು ಮಾತ ನಾಡುತ್ತಿದ್ದರು. ಯೋಜನಾ ವರದಿ ಗಳನ್ನು ಅನುಷ್ಠಾನಕ್ಕೆ ತರುವ ಹೊಣೆ ಪಾಲಿಕೆಯ ಜೊತೆ ನಾಗರೀಕ ಸಮಾಜಕ್ಕೂ ಇದೆ. ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಮಂಗಳೂರು ನಗರದಲ್ಲಿ ನೈರ್ಮಲ್ಯದ ಬಗ್ಗೆ ಪಾಲಿಕೆಯಷ್ಟೇ ಹೊಣೆ ನಾಗರೀಕರದ್ದು; ಎಲ್ಲಿಯವರೆಗೆ ನಾಗರೀಕರಿಗೆ ಈ ಬಗ್ಗೆ ಅರಿವು ಮೂಡುವುದಿಲ್ಲ ಅಲ್ಲಿಯವರೆಗೆ ಸ್ವಚ್ಛ, ಸುಂದರ ನಗರ ನಿರ್ಮಾಣ ಕಷ್ಟ ಎಂದರು. ಒಬ್ಬ ಅಧಿಕಾರಿ ಆರುಲಕ್ಷ ನಾಗರೀಕರಿರುವ ನಗರದ ನೈರ್ಮಲ್ಯಕ್ಕೆ ಯೋಜನೆಗಳನ್ನು ನೀಡಿ ಅನುಷ್ಠಾನಕ್ಕೆ ತರಬಹುದು; ಆದರೆ ನಿರ್ವಹಣೆ ಮತ್ತು ಜವಾಬ್ದಾರಿ ಜನರಿಗಿರಿಬೇಕು. ನಮ್ಮ ಮನೆಯಷ್ಟೆ ಹಾದಿ ಬೀದಿಗಳನ್ನು ಸ್ವಚ್ಛವಾಗಿಡಬೇಕೆಂಬ ಜ್ಞಾನ ಜನರಲ್ಲೂ ಮೂಡಬೇಕು ಎಂದರು.
ಎಲ್ಲ ನಾಗರೀಕ ಪ್ರಜ್ಞೆ ಮತ್ತು ಕರ್ತವ್ಯಗಳನ್ನು ದಂಡ ವಿಧಿಸಿ ಜಾರಿಗೆ ತರುವುದು ಅಸಾಧ್ಯದ ಕೆಲಸ ಎಂದ ಅವರು, %50 ಸಿಬ್ಬಂದಿ ಕೊರತೆಯ ಹೊರತಾಗಿಯೂ ತನ್ನ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಪಾಲಿಕೆ ಅನುಷ್ಠಾನಕ್ಕೆ ತರುತ್ತಿದೆ ಎಂದರು.
ನಗರದ ಒಳಚರಂಡಿ ವ್ಯವಸ್ಥೆ, ಕೊಳಚೆ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆ, ಸಾರ್ವಜನಿಕ ಶೌಚಾಲಯ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಗಹನ ಚರ್ಚೆ ನಡೆಯಿತು. ಯೋಜನಾ ವರದಿಯ ಕರಡು ಪ್ರತಿಯನ್ನು ಆಡ್ಮಿನಿಸ್ಟ್ರೇಷನ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದ ಶ್ರೀಮತಿ ವಾಸುಕಿ ನರಾಲಾ ಅವರು ಪ್ರಸ್ತುತಪಡಿಸಿದರು.
ಈ ವರದಿಯ ಹಲವು ಅಂಶಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತಲ್ಲದೆ, ಅವರೊಂದಿಗೆ ನಾಳೆ ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಲು ಸದಸ್ಯರಿಗೆ ಆಯುಕ್ತರು ಸೂಚನೆ ನೀಡಿದರು.
ನಗರ ನೈರ್ಮಲೀಕರಣದಡಿ ನಗರ ಯೋಜನೆ, ಸಾರ್ವಜನಿಕ ಆರೋಗ್ಯ, ನೀರು ಮತ್ತು ನೈರ್ಮಲ್ಯ, ನೀರು ಶುದ್ದೀಕರಿಸಿ ಪುನರ್ ಬಳಕೆ ಮಾಡುವ ಬಗ್ಗೆ, ಇದೆಲ್ಲದರ ಪರಿಣಾಮ ಸಾರ್ವಜನಿಕ ಆರೋಗ್ಯ ಎಂಬುದರ ಕುರಿತು ಕರಡು ಯೋಜನೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಶಾಲೆಗಳಲ್ಲಿ ನಿರ್ಮಲ ಶೌಚಾಲಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವ ಕುರಿತ ಪ್ರಸ್ತಾಪಗಳು ಯೋಜನೆಯಲ್ಲಿ ಅಡಕವಾಗಿದೆ. ಈ ವರದಿ ಮಹಾನಗರಪಾಲಿಕೆಯಿಂದ ಒಂದೂವರೆ ವರ್ಷದ ಹಿಂದೆ ಪಡೆದ ಅಂಕಿ ಸಂಖ್ಯೆಗಳ ಮೇಲೆ ಅವಲಂಬಿತವಾಗಿದ್ದು, ಇದನ್ನು ಇನ್ನಷ್ಟು ಉತ್ತಮ ಪಡಿಸಬೇಕಿದೆ ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೂ ಯೋಜನೆಯನ್ನು ಇನ್ನಷ್ಟು ಸ್ಥಳೀಯವಾಗಿಸುವ ಬಗ್ಗೆಯೂ ಸದಸ್ಯರು ಒತ್ತಾಯಿಸಿದರು. ಎಲ್ಲರ ಅಭಿಪ್ರಾಯ ಹಾಗೂ ಮಾಹಿತಿಗಳನ್ನು ವರದಿಯಲ್ಲಿ ಅಳವಡಿಸಿ ಪ್ರಸ್ತುತ ಪ್ರಡಿಸುವುದಾಗಿ ಶ್ರೀಮತಿ ವಾಸುಕಿಯವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಮೇಯರ್ ಗುಲ್ಜಾರ್ ಭಾನು ವಹಿಸಿದ್ದರು. ಪಾಲಿಕೆ ಸದಸ್ಯ ಭಾಸ್ಕರ ಚಂದ್ರ ಉಪಸ್ಥಿತರಿದ್ದರು.