ಮಂಗಳೂರು,ಏಪ್ರಿಲ್.18:ಮಂಗಳಾ ಕ್ರೀಡಾಂಗಣದಲ್ಲಿ ಅಳವಡಿಸುತ್ತಿರುವ ಸಿಂಥೆಟಿಕ್ ಟ್ರ್ಯಾಕ್ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಸ್ಪಷ್ಟಪಡಿಸಿದ್ದಾರೆ.ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಸಮಿತಿಯ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿಗಳು, ಕಾರ್ಯಕ್ಷಮತೆ, ಸಿವಿಲ್ ಕಾಮಗಾರಿಗಳ ಬಗ್ಗೆ ಇಂಜಿನಿಯರ್ ಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು.
ರಾಜ್ಯದ 2ನೇ ಸಿಂಥೆಟಿಕ್ ಟ್ಯ್ರಾಕ್ ಕ್ರೀಡಾಂಗಣ ಇದಾಗಿದ್ದು, ಅತ್ಯಂತ ಉತ್ಕೃಷ್ಟವಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ತಾಂತ್ರಿಕ ಸಮಿತಿ ಮತ್ತು ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದ್ದು, ಕ್ಷೇತ್ರದಲ್ಲಿ ನೈಪುಣ್ಯ ಹೊಂದಿದವರು ಕಾಮಗಾರಿಯ ಬಗ್ಗೆ ಕಣ್ಣಿರಿಸಿದ್ದಾರೆ.'ಡಿ' ಆಕಾರ 23 ಮೀಟರ್ ಹೊಂದಿದ್ದು, ಡಿಸೈನ್ ನಲ್ಲಿ 20 ಮೀಟರ್ ಇತ್ತು. ಇದನ್ನು ಈಗಾಗಲೇ ಸರಿಪಡಿಸಲಾಗಿದೆ. ಕ್ರೀಡಾಂಗಣ ಹಾಗೂ ಕ್ರೀಡಾಳುಗಳ ಹಿತವನ್ನು ಗಮನದಲ್ಲಿರಿಸಲಾಗಿದೆ; ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ ಫೆಡರೇಷನ್ ನಿಯಮಾವಳಿಯಂತೆ ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿರುವಂತೆ ಒಟ್ಟು 1170.3 ಚದರ ಮೀಟರ್ ಗಳಿದ್ದು, ಡಿ ಏರಿಯಾ 23 ಮೀಟರ್ ಗಳಿದೆ. ಎಲ್ಲ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ನಿಗದಿತ ಅವಧಿಯಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಮಳೆಗಾಲದ ವೇಳೆ ಕಾಮಗಾರಿಯ ನಿರ್ವಹಣೆಗೆ ಅನುಕೂಲವಾಗುವಂತೆ ಸುವ್ಯವಸ್ಥಿತ ಚರಂಡಿ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ ಎಂದರು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಮಿತಿಯ ಅಧ್ಯಕ್ಷರಾದ ಎ ಮಂಜುನಾಥ್, ಕೃಷ್ಣ ಶೆಣೈ, ಅರುಣ್ ರಾವ್, ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಪಾರ್ಶ್ವನಾಥ್ ಉಪಸ್ಥಿತರಿದ್ದರು.