ಮಂಗಳೂರು,ಏಪ್ರಿಲ್.02:ಕರ್ನಾಟಕ ರಾಜ್ಯ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ ಅವರು ಇತ್ತೀಚೆಗೆ ನೆಟ್ಟಣ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಕಂಡುಬಂದಿದ್ದ ಹಲವಾರು ಲೋಪದೋಷಗಳನ್ನು ಕೂಡಲೇ ಸರಿಪಡಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದಂತೆ ಮೈಸೂರು ವಿಭಾಗದ ಹಿರಿಯ ರೈಲ್ವೆ ಅಧಿಕಾರಿಗಾಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಂಡಿರುವುದಾಗಿ ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸನ್ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರೈಲ್ವೆ ಅಭಿವೃದ್ದಿ ಸಮಿತಿ ಸಭೆಗೆ ಅಧಿಕಾರಿಗಳು ತಿಳಿಸಿದರು.
ಪಡೀಲ್ ಬಜಾಲ್ ಅಂಡರ್ ಪಾಸ್ ಕಾಮಗಾರಿಗೆ ತಗಲುವ ಅಂದಾಜು ವೆಚ್ಚವನ್ನು ತಯಾರಿಸಿ ಶೀಘ್ರ ಸಲ್ಲಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು. ಜೆಪ್ಪು ಕುಡಿಪ್ಪಾಡಿ ರೈಲ್ವೆ ಅಂಟರ್ ಪಾಸ್ ಕಾಮಗಾರಿಗೆ ಮಹಾನಗರ ಪಾಲಿಕೆ ವತಿಯಿಂದ ರೂ.9.75ಲಕ್ಷ ಠೇವಣಿ ಇಡಲಾಗಿದ್ದು ಕಾಮಗಾರಿ ಆರಂಭವಾಗಭೆಕಿದೆ ಎಂದು ಸಭೆಗೆ ತೀಳಿಸಲಾಯಿತು.
ಮುಂಬೈ-ಮಂಗಳೂರು ರೈಲಿಗೆ ಕನ್ನಡ ನಾಮಪಲಕಗಳನ್ನು ಅಳವಡಿಸುವಂತೆ, ಮಂಗಳೂರು-ವೆರ್ನ ರೈಲಿಗೆ ಹೆರಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ಶ್ರೀ ಹನುಮಂತನಾಯಕ್ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ವಿಧಾನಸಭೆ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್,ಪಾಲ್ಘಾಟ್ ವಿಭಾಗದ ಡಿ.ಸಿ.ಎಮ್. ಪದ್ಮದಾಸ್, ವಿಭಾಗೀಯ ಇಂಜಿನಿಯರ್ ನಲ್ಲಮುತ್ತು ಮಾಣಿಕ್ಯಮ್ ಮುಂತಾದವರು ಹಾಜರಿದ್ದರು.