ಮಂಗಳೂರು,ಏಪ್ರಿಲ್.18: ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆಯಡಿ ರೂ.59 ಲಕ್ಷ ಬಿಡುಗಡೆ ಅಗಿದ್ದು, ಈ ಹಣದಿಂದ ಮಕ್ಕಳ ಪುನರ್ವಸತಿ, ಶಿಕ್ಷಣ ಸೇರಿದಂತೆ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಡಾ|ಎನ್.ಎಸ್.ಚನ್ನಪ್ಪಗೌಡ ಅವರು ತಿಳಿಸಿದ್ದಾರೆ.
ಅವರು ಮಂಗಳವಾರ ಸಂಜೆ ತಮ್ಮ ಕಛೇರಿಯಲ್ಲಿ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷರಾದ ಶ್ರೀಮತಿ ನೀನಾ ನಾಯಕ್ ಅವರು ನಡೆಸಿದ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣೆ ಕುರಿತು ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದರು.ಜಿಲ್ಲೆಯಲ್ಲಿ ಕಂಡು ಬಂದಿರುವ ಅಪೌಷ್ಟಿಕ ಮಕ್ಕಳ ಬಗ್ಗೆ ನಿಗಾ ವಹಿಸಲಾಗಿದ್ದು ಅಂತಹ ಮಕ್ಕಳ ಕುಟುಂಬಗಳಿಗೆ ಉತ್ತಮ ಪೌಷ್ಟಿಕ ಆಹಾರ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ತೀರಾ ಅಸ್ವಸ್ಥರಾಗಿದ್ದ 27 ಮಕ್ಕಳನ್ನು ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಶಿಶು ವೈದ್ಯರಿಂದ ವಿಶೇಷ ಕಾಳಜಿ ವಹಿಸಿ ಶೂಶ್ರುಷೆ ನೀಡಲಾಗುತ್ತಿದೆ, ಅಲ್ಲದೆ ಬಾಲ ಸಂಜೀವಿನಿ ಯೋಜನೆಯನ್ವಯ ಅವರ ಅರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲೆಯಲ್ಲಿರುವ ಅಂಗನವಾಡಿಗಳು ಕಗ್ಗತ್ತಲಿನಲ್ಲಿವೆ ಎಂಬುದಾಗಿ ಸಾರ್ವಜನಿಕರೊಬ್ಬರು ದೂರಿದ ಬಗ್ಗೆ ಆಯೋಗದ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನ ಸೆಳೆದಾಗ ಇದಕ್ಕೆ ಉತ್ತರಿಸಿದ ಸಿ ಇ ಓ ರವರು ಈ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯತ್ ಕ್ರಮ ಕೈಗೊಂಡಿದ್ದು ಇನ್ನು 3-4 ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಾಜೀವ್ ಗಾಂಧಿ ಎನರ್ಜಿ ಯೋಜನೆಯನ್ವಯ ವಿದ್ಯುತ್ ಸಂಪರ್ಕಕಲ್ಪಿಸಲಾಗುವುದೆಂದು ಎಂದರು.
ಬಹುಮಹಡಿಗಳ ಕಟ್ಟಡಗಳ ಸಮೀಪ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ರಕ್ಷಣೆ ದೃಷ್ಟಿಯಿಂದ ಅಂತಹ ಸ್ಥಳಗಳಲ್ಲಿ ಅಂಗನವಾಡಿ ಅಥವಾ ಟೆಂಟ್ ಶಾಲೆಗಳನ್ನು ತರೆದು ಅವರಿಗೆ ರಕ್ಷಣೆ ಕೊಡುವುದಲ್ಲದೆ ಆಹಾರ ಸರಬರಾಜನ್ನು ಸಹ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡುವಂತೆ ಮಕ್ಕಳ ಕಲ್ಯಾಣ ಸಮಿತಿಗೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ಶಿಕ್ಷಣ ಇಲಾಕೆ ಮುಂಜಾಗ್ರತೆ ವಹಿಸುವಂತೆ ಹಾಗೂ ಯಾವುದೇ ಖಾಸಗಿ ಶಾಲೆಗಳು ಏಪ್ರಿಲ್ 30ಕ್ಕೆ ಮುಂಚೆ ಶಾಲೆಗೆ ಪ್ರವೇಶಾತಿಯನ್ನು ಮಾಡಿಕೊಳ್ಳದಂತೆ ನೋಡಿಕೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕರಿ ಡಾ. ಓ.ಶ್ರೀರಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶ್ರೀಮತಿ ಗ್ರೇಸಿ ಗೊನ್ಸಾಲ್ವಿಸ್, ಮಕ್ಕಳ ನ್ಯಾಯ ಸಮಿತಿ ಅಧ್ಯಕ್ಷೆ ಶ್ರೀಮತಿ ಆಶಾನಾಯಕ್ ಮುಂತಾದವರು ಹಾಜರಿದ್ದರು.