ಮಂಗಳೂರು,ಏಪ್ರಿಲ್.14:ಇಂದು ಭಾರತ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಟವಾದ ಪ್ರಜಾಪ್ರಭುತ್ವ ಹೊಂದಲು ಸಾಧ್ಯವಾಗಿದ್ದರೆ ಅದು ಡಾ|ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ.ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪುರಭವನದಲ್ಲಿ ಏರ್ಪಡಿಸಿದ್ದ ಡಾ|ಬಿ.ಆರ್.ಅಂಬೇಡ್ಕರ್ ಅವರ 121 ಜನ್ಮ ದಿನಾಚರಣೆಯನ್ನು ಡಾ|ಅಂಬೇಡ್ಕರ್ ಅವರ ಪುತ್ಥಳಿಗೆ ವಿಧಾನಸಭೆಯ ಉಪಾಧ್ಯಕ್ಷರೊಂದಿಗೆ ಮಾಲಾರ್ಪಣೆ ಮಾಡಿದ ನಂತರ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಡಾ|ಅಂಬೇಡ್ಕರ್ ಅವರಿಗೆ ಹುಟ್ಟು ಹಬ್ಬದ ನಮನ ಸಲ್ಲಿಸುವುದೆಂದರೆ ಅವರ ತತ್ವ ಆದರ್ಶಗಳನ್ನು ಪಾಲಿಸುವುದೇ ಅಗಿದೆ, ಕೇವಲ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವುದಕ್ಕಿಂತ ಅವರು ತೋರಿದ ಮಾರ್ಗದಲ್ಲಿ ನಡೆಯುವ ಮೂಲಕ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಿದ್ದಾಂತವನ್ನು ಅಳವಡಿಸಿಕೊಳ್ಳುವಂತೆ ಅವರು ತಿಳಿಸಿದರು.
ಅಂಬೇಡ್ಕರ್ ಅವರೊಬ್ಬ ಮಹಾನ್ ಮಾನವತಾವಾದಿ ಅವರು ತಮಗೆ ಸಂವಿಧಾನ ರಚಿಸಲು ಅವಕಾಶ ದೊರೆತಾಗ ಅದನ್ನು ತಮಗೆ ನೋವುಂಟು ಮಾಡಿದವರ ವಿರುದ್ದ ಬಳಸಿಕೊಳ್ಳದೇ ಸಮಾಜದ ಎಲ್ಲಾ ವರ್ಗಗಳ ಜನರಿಗೂ ಒಳಿತಾಗುವಂತೆ ಸಂವಿಧಾನ ರಚಿಸಿದ ಒಬ್ಬ ಧೀಮಂತ ರಾಷ್ಟ್ರನಾಯಕರೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್ ಅವರು ಮಾತನಾಡಿ, ಎಲ್ಲಿಯವರೆಗೆ ನಮ್ಮಲ್ಲಿ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗುವುದಿಲ್ಲವೋ ಅಲ್ಲಿಯವರೆಗೆ ನಾವು ಡಾ|ಅಂಬೇಡ್ಕರ್ ಅವರಿಗೆ ಸಲ್ಲಿಸುವ ಪ್ರಣಾಮಗಳು ಅರ್ಥಹೀನವಾಗಿರುತ್ತವೆ. ಆದ್ದರಿಂದ ನಮ್ಮ ಸಮಾಜದಲ್ಲಿರುವ ಎಲ್ಲರಿಗೂ ಶಿಕ್ಷಣ, ಸಮಾನತೆ ದೊರಕಿಸಿದಾಗ ಮಾತ್ರ ಶೋಷಣೆ ಮುಕ್ತ ಸಮಾಜ ಕಾಣಲು ಸಾಧ್ಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುದ್ಮುಲ್ ರಂಗರಾವ್ ಹಾಗೂ ಡಾ|ಅಂಬೇಡ್ಕರ್ ಅವರ ಆದರ್ಶಗಳು ಸಾಮಾಜಿಕ ಪರಿವರ್ತನೆಗೆ ನಾಂದಿಯಾಯಿತು ಎಂದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಅವರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಇಚ್ಚಾಶಕ್ತಿಯನ್ನು ಅಧಿಕಾರಿ ವರ್ಗ ಬೆಳೆಸಿಕೊಳ್ಳದ ಹೊರತು ಸಮಾನ ಸಮಾಜ ದುರ್ಲಭ ಎಂದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಇಚ್ಚಾಶಕ್ತಿಯನ್ನು ಹೊಂದಿ ಕೆಳವರ್ಗದ ಜನರನ್ನು ಮೇಲೆತ್ತುವ ಕೆಲಸ ಮಾಡಬೇಕೆಂದರು.ಶಾಸಕರಾದ ಶ್ರೀ ಯು.ಟಿ.ಖಾದರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ, ಉಪ ಮೇಯರ್ ಶ್ರೀಮತಿ ಅಮಿತಕಲಾ, ರಾಜ್ಯ ಬಾಲ ಭವನ ಅಧ್ಯಕ್ಚರಾದ ಶ್ರೀಮತಿ ಸುಲೋಚನಾ ಭಟ್, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಿ, ನಾಗರಾಜಶೆಟ್ಟಿ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎನ್,ಬಿ.ಅಬೂಬಕರ್, ಮಂಗಳೂರು ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ,ಜಿಲ್ಲಾಧಿಕಾರಿ ಡಾ|ಎನ್.ಎಸ್.ಚನ್ನಪ್ಪಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ.ಎನ್.ವಿಜಯಪ್ರಕಾಶ್ , ಪಶ್ಚಿಮ ವಲಯ ಐಜಿಪಿ ಪ್ರತಾಪರೆಡ್ಡಿ, ಪೋಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್, ಎಸ್.ಪಿ ಅಭಿಷೇಕ್ ಗೋಯೆಲ್, ಮತ್ತಿರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ|ಅಭಯ ಕುಮಾರ್ ಕೌಕ್ರಾಡಿ ಅವರು ಡಾ|ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಶಿಷ್ಟರಿಗೆ ವಾದ್ಯಪರಿಕರಗಳು, ತೋಟಗಾರಿಕೆ ಇಲಾಖೆಯಿಂದ ಸಹಾಯಧನದ ಚೆಕ್ ಗಳನ್ನು,ಸಮಾಜಕಲ್ಯಾಣ ಇಲಾಖೆಯಿಂದ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರೋತ್ಸಾಹ ಧನದ ಚೆಕ್ ಗಳನ್ನು ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರುಣ್ ಫುಟ್ರಾಡೊ ಸ್ವಾಗತಿಸಿದರು. ಅಗ್ನಿ ಶಾಮಕ ದಳದಿಂದ ಪುರಭವನದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.