Friday, April 26, 2013

ಶಿಸ್ತುಬದ್ಧ ಆಕರ್ಷಕ ಮತದಾರರ ಜಾಗೃತಿ ಜಾಥಾ

ಮಂಗಳೂರು, ಎಪ್ರಿಲ್. 26:-ಮತದಾರರಲ್ಲಿ ಅವರ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ,ತಾಲೂಕು ಮತ್ತು ಗ್ರಾಮ ಪಂಚಾಯತ್ ಗಳು ಬೆಳ್ತಂಗಡಿ ತಾಲೂಕಿನಾದ್ಯಂತ ಹಮ್ಮಿಕೊಂಡಿದ್ದ ಮತದಾರರ ಜಾಥಾ ಸಮಾರೋಪವು ನೂರಾರು ವಾಹನಗಳಲ್ಲಿ ಅಧಿಕಾರಿಗಳು ಸಾರ್ವಜನಿಕರು ಹೆಚ್ಚಿನ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳ್ತಂಗಡಿ ಪೇಟೆಯಿಂದ ಕಕ್ಕಿಂಜೆ ವರೆಗೆ ನಡೆದ ಮತದಾರರ ಜಾಥಾ ಮೆರವಣಿಗೆ ಅತ್ಯಾಕರ್ಷಕವಾಗಿ ಜನರನ್ನು ರಂಜಿಸಿತು.
ಜಾಥಾ ಮೆರವಣಿಗೆ ನಂತರ ಸಮಾರೋಪ ಭಾಷಣ ಮಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ . ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ ಪ್ರತಿಯೊಬ್ಬ ನಾಗರೀಕನೂ ತನ್ನ ಮತದಾನದ ಹಕ್ಕನ್ನು ಚಲಾಯಿಸಿ ಪರಿಣಾಮಕಾರಿ ಆಡಳಿತ ನೀಡುವ ಮೂಲಕ ಸರ್ಕಾರ ರಚನೆಯಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ನಾಂದಿ ಹಾಡಬೇಕೆಂದು ಕರೆಯಿತ್ತರು.
ತಹಶೀಲ್ದಾರ್ ಶ್ರೀನಿವಾಸ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನರೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಟ್ಟಸ್ವಾಮಿ,ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ವೇದಿಕೆಯಲ್ಲಿದ್ದರು.
ಲಾಯಿಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ ಲಾಯಿಲಾ ಕಾರ್ಯಕ್ರಮ ನಿರ್ವಹಿಸಿದರು.  ಅಧಿಕಾರಿಗಳಾದ ಡಾ.ಸುಧಾಕರ ಶೆಟ್ಟಿ,ಪ್ರವೀಣ್ ಕುಮಾರ್ ಶೆಟ್ಟಿ, ಸುಭಾಶ್ಚಂದ್ರ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಜಾಥಾದಲ್ಲಿ ಪಾಲ್ಗೊಂಡರು.