Thursday, April 11, 2013

ಚುನಾವಣಾ ಖರ್ಚು ವೆಚ್ಚ ಉಸ್ತುವಾರಿ- ವಿಡಿಯೋ ಕಾನ್ಫರೆನ್ಸ್

ಮಂಗಳೂರು.ಏಪ್ರಿಲ್.11:ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದ್ದು, ಎಲ್ಲರೂ ಈ ಮಾಹಿತಿಯನ್ನು ಚುನಾವಣಾ ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಬಗ್ಗೆ ಹಾಗೂ ಚುನಾವಣೆಯನ್ನು ಸ್ವಚ್ಛವಾಗಿ ನಡೆಸುವ ಸಂಬಂಧ ಇಂದು ಚುನಾವಣಾ ಖರ್ಚುವೆಚ್ಚ ಉಸ್ತುವಾರಿ ವಹಿಸಿಕೊಂಡಿರುವ ವಿಶೇಷ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಪೂರ್ವಾಹ್ನ 11ರಿಂದ ಸಂಜೆ 5 ಗಂಟೆವರೆಗೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
             ಎಲ್ಲ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಖರ್ಚು ವೆಚ್ಚ ವಹಿಸಿಕೊಂಡಿರುವ ಅಧಿಕಾರಿಗಳಿಗೆ ಸವಿವರ ಮಾಹಿತಿ ನೀಡಿದ ಪಾಂಡೆ ಅವರು, ಕಾನೂನು ಪ್ರಕಾರ ಮಾಡಬಹುದಾದ ಪ್ರಚಾರ ವೆಚ್ಚಗಳು 16 ಲಕ್ಷ ರೂ.ಗಳಿಗೆ ಸೀಮಿತವಾಗಿದ್ದು, ಹಣ ಹಂಚುವುದು, ಉಡುಗೊರೆ ನೀಡುವುದು, ಸಾರಾಯಿ ಹಂಚುವುದು ಇಂತಹ ಯಾವುದೇ ಅಕ್ರಮಗಳಿಗೆ ಚುನಾವಣಾ ಆಯೋಗ ಅವಕಾಶ ನೀಡುವುದಿಲ್ಲ ಎಂದರು.
ಸೆಕ್ಷನ್ 10 ಎ ಪ್ರಕಾರ ಚುನಾವಣಾ ವೆಚ್ಚ ವಿವರವನ್ನು ಕಾಲಮಿತಿಯೊಳಗೆ ನಿಗದಿತ ಮಾದರಿಯಲ್ಲಿ ನೀಡದಿದ್ದರೆ ಚುನಾವಣಾ ಆಯೋಗ ಸೂಕ್ತ ಕ್ರಮಕೈಗೊಳ್ಳಲಿದೆ. ಸೆಕ್ಷನ್ 77, 78, ನಡಿ ಚುನಾವಣಾ ವೆಚ್ಚ ವೀಕ್ಷಣೆ, ಸೆಕ್ಷನ್ 127ಎ ಅಡಿಯಲ್ಲಿ ಮುದ್ರಣ ಸಾಮಗ್ರಿ ಮುದ್ರಕರ ಮಾಹಿತಿ ಇಲ್ಲದೆ ಮುದ್ರಿಸಲ್ಪಡಬಾರದು, ಎಲ್ಲ ಪ್ರಚಾರ ಸಾಮಗ್ರಿಗಳಿಗೆ ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕು ಎಂದು ವಿವರಿಸಿದರು.
ಎಲ್ಲ ವಾಹನಗಳ ತಪಾಸಣೆ ಕಡ್ಡಾಯ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಗೆ ಮೂವರು ಚುನಾವಣಾ ಖರ್ಚು ವೆಚ್ಚ ವೀಕ್ಷಕರು ಆಗಮಿಸಿದ್ದು, ಎಲ್ಲ ಬೆಳವಣಿಗೆಗಳನ್ನು ಗಮನಿಸಲಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಗಳ ಜೊತೆ  ಮುಖ್ಯ ಚುನಾವಣಾಧಿಕಾರಿ  ಅನಿಲ್ ಕುಮಾರ್ ಝಾ ಅವರು ಮಾತುಕತೆ ನಡೆಸಿ ಮಾಹಿತಿ ನೀಡಿದರು.