Sunday, April 7, 2013

ನೀತಿ ಸಂಹಿತೆ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ: ಹರ್ಷಗುಪ್ತ

ಮಂಗಳೂರು, ಏಪ್ರಿಲ್.07: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಧ್ಯಮಗಳು ರಾಜಕೀಯ ಪಕ್ಷಗಳಿಗೆ ಅಥವಾ ವ್ಯಕ್ತಿಗಳಿಗೆ ಸಂಬಂಧಿಸಿದ ಸುದ್ದಿಯನ್ನು ಪ್ರಕಟಿಸುವಾಗ ಎಚ್ಚರಿಕೆ ವಹಿಸಬೇಕು. ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳನ್ನು  ಬೆಂಬಲಿಸುವುದು ಅಥವಾ ವೈಭವೀಕರಿಸುವ ಸುದ್ದಿ ಪ್ರಕಟವಾದರೆ ಅದನ್ನು ಗಂಭೀರವಾಗಿ ಪರಿಗಣಿಸಿವುದಲ್ಲದೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷಗುಪ್ತ ಎಚ್ಚರಿಸಿದ್ದಾರೆ.

ಇಂದು  ದ.ಕ.ಜಿಲ್ಲಾ ವಾರ್ತಾ ಇಲಾಖೆಯ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಅಭ್ಯರ್ಥಿಗಳು ಕೂಡ ನಿಯಮ ಮೀರಿ ವರ್ತಿಸಬಾರದು. ಜಾಹೀರಾತು ನೀಡುವ ಮೊದಲು ಜಿಲ್ಲಾಡಳಿತ ನೇಮಕ ಮಾಡಿರುವ ಮೀಡಿಯಾ ಸರ್ಟಿಫಿಕೇಶನ್ ಮೊನಿಟರಿಂಗ್ ಸಮಿತಿಯ ಗಮನಕ್ಕೆ ತರಬೇಕು ಎಂದರು.

ನಿಯಮ ಮೀರುವ ಅಭ್ಯರ್ಥಿಗಳ ವಿರುದ್ಧ ನಿಗಾ ಇಡುವ ನಿಟ್ಟಿನಲ್ಲಿ ಹಾಗೂ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಬಗ್ಗೆ ಹದ್ದಿನ ಕಣ್ಣಿಡಲು ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ವಾರ್ತಾಇಲಾಖೆ ಕಚೇರಿ ಕಟ್ಟಡದಲ್ಲಿ ಮಾಧ್ಯಮ ನಿಯಂತ್ರಣಾ ಕೇಂದ್ರವೊಂದನ್ನು ಪ್ರಾರಂಭಿಸಿದೆ. ಇದರಂತೆ ಮೀಡಿಯಾ ಸರ್ಟಿಫಿಕೇಶನ್ ಮೊನಿಟರಿಂಗ್ ಕಮಿಟಿ(ಮಾಧ್ಯಮ ಪ್ರಾಮಾಣೀಕರಣ ಮತ್ತು ಪರಾಮರ್ಷನಾ ಸಮಿತಿ-ಎಂಸಿಎಂಸಿ) ಈ ಬಗ್ಗೆ ಮಾಧ್ಯಮಗಳ ಮೇಲೆ ಹೆಚ್ಚಿನ ನಿಗಾ ಇಡಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ವಾರ್ತಾ ಇಲಾಖೆ ಕಟ್ಟಡದಲ್ಲಿ ದಿನದ 24ಗಂಟೆಯೂ ಕಾರ್ಯನಿರ್ವಹಿಸುವಂತಹ ಮಾಧ್ಯಮ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇಲ್ಲಿರುವ ಸಿಬ್ಬಂದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲೆ ನಿಗಾ ಇಡಲಿದ್ದಾರೆ. ಎಸ್ಎಂಎಸ್, ಸಾಮಾಜಿಕ ಅಂತರ್ಜಾಲ ತಾಣಗಳು, ವೆಬ್ ಸೈಟ್ ಗಳಲ್ಲಿ ಪಕ್ಷದ ಪರ ಪ್ರಚಾರ ಮಾಡಿದರೆ ಪ್ರಕರಣ ದಾಖಲಿಸಲಾಗುವುದು ಎಂದರು.
ಯಾವದೇ ದೂರುಗಗಳಿದ್ದರೆ 1077ಗೆ ಕರೆ ಮಾಡಿ. ಸಾರ್ವಜನಿಕರಿಗಾಗಿ ಸಹಾಯವಾಣಿ 1077 ತೆರೆಯಲಾಗಿದ್ದು ಯಾವುದೇ ದೂರುಗಳನ್ನು ಇಲ್ಲಿ ದಾಖಲಿಸಿಕೊಳ್ಳಬಹುದಾಗಿದೆ ಎಂದು ಹರ್ಷಗುಪ್ತ ತಿಳಿಸಿದರು.ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಉಪಸ್ಥಿತರಿದ್ದರು.