ಮಂಗಳೂರು,ಸೆಪ್ಟೆಂಬರ್.24: ಭವ್ಯ ಭಾರತ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಮಹತ್ವದ್ದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರಿಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಭಾರತ ಸರ್ಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವ ಸಮಾವೇಶ, ಎನ್ ಎಸ್ ಎಸ್ ದಿನಾಚರಣೆ ಹಾಗೂ ಕ್ರೀಡಾ ಸಾಮಗ್ರಿ ವಿತರಣಾ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಯುವಶಕ್ತಿಯನ್ನು ರೂಪಿಸಲು ಎನ್ ಎಸ್ ಎಸ್ ನಂತಹ ಘಟಕಗಳು ಪ್ರಮುಖ ಪಾತ್ರ ವಹಿಸಿದ್ದು, ಪ್ರತಿಭೆಗಳು ಅರಳಲು ಸಾಧ್ಯ. ಸಾಧನೆ ಮತ್ತು ಸೇವೆ ನಮ್ಮ ಯುವಕರ ಧ್ಯೇಯವಾಗಬೇಕೆಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಅವರು, ವೈಪರೀತ್ಯಗಳಿಂದ ಕೂಡಿದ ಸಮಾಜದಲ್ಲಿ ಯುವಶಕ್ತಿ ಆಮಿಷಗಳಿಗೆ ಬಲಿಯಾಗದೆ ಮೂಲಭೂತವಾದ ನಮ್ಮ ಸಂಸ್ಕೃತಿ, ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಜ್ಞಾನಾರ್ಜನೆ ಜೊತೆ ಜೊತೆಗೆ ಸಾಮಾಜಿಕ ಮೌಲ್ಯಗಳ ಸಂರಕ್ಷಣೆಯ ಹೊಣೆಯೂ ನಮ್ಮದೇ ಎಂಬುದನ್ನು ಮರೆಯಬಾರದು ಎಂದರು.
ನಗರದ ರೇಡಿಯೋ ಪಾರ್ಕನ ಅಭಿವೃದ್ಧಿಗೆ ಎನ್ ಎಸ್ ಎಸ್ ಘಟಕ ನೀಡಿದ ಕೊಡುಗೆಯನ್ನು ಸ್ಮರಿಸಿದ ಸಿಇಒ ಅವರು, ಯುವಚೈತನ್ಯದ ಸದ್ಬಳಕೆಗೆ ಮಾದರಿ ಕಾರ್ಯಕ್ರಮ ಅದಾಗಿತ್ತು. ಪಾಲಿಕೆಯಲ್ಲಿ ಎಸ್ಟಿಮೇಷನ್ ಮಾಡಿಸಿ ಪಾಕ್ರ್ ಸ್ವಚ್ಛಗೊಳಿಸಿದರೆ ಅದರ ಖರ್ಚು ದುಪ್ಪಟ್ಟಾಗುತ್ತಿತ್ತು ಎಂದರು. ಸಾಮಾಜಿಕ ಅಭಿವೃದ್ಧಿ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಯುವಶಕ್ತಿಯ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದರು.
ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ದಯಾನಂದ ನಾಯಕ್, ರಾಷ್ಟ್ರೀಯ ಸೇವಾಯೋಜನೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನಾಧಿಕಾರಿ ಗಣನಾಥ ಎಕ್ಕಾರು ಸಮಾರಂಭದಲ್ಲಿ ಉಪಸ್ಥಿತರಿದ್ದರು.