ಮಂಗಳೂರು.ಸೆಪ್ಟೆಂಬರ್.12: ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹದಿಹರೆಯದವರಿಗಾಗಿ ಸ್ನೇಹ ಕ್ಲಿನಿಕ್ ಮುಖಾಂತರ ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಈ ಯೋಜನೆಯ ಪ್ರಯೋಜನವನ್ನು ನಮ್ಮ ಯುವ ಜನಾಂಗ ಪಡೆದುಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಎನ್ಎಸ್.ಚನ್ನಪ್ಪಗೌಡ ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಐಇಸಿ ಅನುಷ್ಠಾನ ಹಾಗೂ ಮೇಲ್ವಿಚಾರಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತೀ ಗುರುವಾರ ಅಪರಾಹ್ನ ಆರೋಗ್ಯಾಧಿಕಾರಿಗಳು ಈ ಕಾರ್ಯಕ್ರಮ ನಡೆಸುತ್ತಿದ್ದು, ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿರುವ ಆರೋಗ್ಯ ಶಿಕ್ಷಣ ಕಾರ್ಯಕ್ರಮದ ಸದುಪಯೋಗವಾಗಬೇಕೆಂದರು.
11-12ನೇ ಸಾಲಿನ ಸಮೂಹ ಶಿಕ್ಷಣ ಮಾಧ್ಯಮದಡಿ ಆರೋಗ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಲ್ಲಿ ಕಾರ್ಯಕ್ರಮದ ಅನುಮೋದನೆ ಪಡೆದು ಬಳಿಕ ಕಾರ್ಯಕ್ರಮ ಆಯೋಜಿಸಬೇಕೆಂದ ಅವರು, ಎಲ್ಲ ಕಾರ್ಯಕ್ರಮಗಳನ್ನು ದಾಖಲೀಕರಿಸುವ ಕಾರ್ಯ ಕಡ್ಡಾಯವಾಗಿ ಆಗಬೇಕೆಂದರು.
ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಐಇಸಿ/ಬಿಸಿಸಿ ಕಾರ್ಯಕ್ರಮದಡಿ ಪ್ರಥಮ ಕಂತಿನಲ್ಲಿ 1,32,000 ರೂ. ಬಿಡುಗಡೆಯಾಗಿದೆ. ಐಇಸಿ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಒಟ್ಟು 4,31,500 ರೂ. ಅನುದಾನ ಬಂದಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಸಭೆಗೆ ಮಾಹಿತಿ ನೀಡಿದರು.
ಲಿಂಗಾನುಪಾತ, ಭ್ರೂಣಲಿಂಗಪತ್ತೆಯನ್ನು ನಡೆಸಲು ಆರೋಗ್ಯ ಇಲಾಖೆ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯೋನ್ಮುಖವಾಗಬೇಕೆಂದ ಜಿಲ್ಲಾಧಿಕಾರಿಗಳು, ಕಾರ್ಯಕ್ರಮಗಳು ಜನರನ್ನು ತಲುಪುವಂತಾಗಲು ಸರ್ಕಾರೇತರ ಸಂಘಸಂಸ್ಥೆಗಳ ನೆರವು ಪಡೆದುಕೊಳ್ಳಿ ಎಂದು ಸಲಹೆ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕರಿ ಶ್ರೀ ರಂಗಪ್ಪ, ಡಾ. ಹೇಮಲತಾ ಸಭೆಯಲ್ಲಿ ಉಪಸ್ಥಿತರಿದ್ದರು.