ಮಂಗಳೂರು,ಸೆಪ್ಟೆಂಬರ್.08:ಸರ್ಕಾರದ ಎಲ್ಲಾ ಸೇವಾ ಸೌಲಭ್ಯಗಳನ್ನು ಪಡೆಯುವುದರಿಂದ ಹಿಡಿದು ಮೊಬೈಲ್ ಸಂಪರ್ಕ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಕೇವಲ ಒಂದೇ ಕಾರ್ಡ್ 'ಆಧಾರ್' ನೆರವಾಗಲಿದೆ. ಹಾಗಾಗಿ ಈ ಗುರುತುಚೀಟಿಯನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂದು ಇ ಆಡಳಿತದ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎನ್. ವಿದ್ಯಾಶಂಕರ್ ಹೇಳಿದರು.ಎಲ್ಲ ಜಿಲ್ಲೆಗಳಲ್ಲೂ ಆಧಾರ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಸೆ.7 ರಂದು ವಿಡಿಯೋಕಾನ್ಫರೆನ್ಸ್ ನಡೆಸಿ ಅನುಷ್ಠಾನ ಸಂಬಂಧಿ ನಿರ್ದೇಶನಗಳನ್ನು ನೀಡಿದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೋಜನೆ ಅನುಷ್ಠಾನಕ್ಕೆ ಸಮಿತಿ ರಚಿಸಿ, ಆಂದೋಲನ ಮಾದರಿಯಲ್ಲಿ ಗುರುತು ಚೀಟಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಶೇ.ನೂರು ಸಾಧನೆ ದಾಖಲಿಸಬೇಕಿದೆಎಂದರು.ಈಗಾಗಲೇ ಮೈಸೂರು, ತುಮಕೂರಿನಲ್ಲಿ ಪೈಲೆಟ್ ಯೋಜನೆಯಡಿ ಗುರುತಿಸಿ ಶೇ.97ರಷ್ಟು ಜನರಿಗೆ ಗುರುತುಪತ್ರ ವಿತರಿಸಲಾಗಿದೆ.ಎರಡನೇ ಹಂತದಲ್ಲಿ ರಾಜ್ಯದಎಲ್ಲ ಜಿಲ್ಲೆಗಳಲ್ಲಿ ಗುರುತು ಚೀಟಿ ವಿತರಿಸಲು 100 ರಿಂದ 300 ಸೇವಾ ಕೇಂದ್ರಗಳನ್ನು ತೆರೆಯಲಾಗುವುದು.ದುರ್ಗಮ ಪ್ರದೇಶಗಳಲ್ಲಿ ಮೊಬೈಲ್ ವಾಹನಗಳ ಮೂಲಕ ಜನರಿಗೆ ಗುರುತುಚೀಟಿ ಮಾಡಿಸಲು ನೆರವು ನೀಡಲಾಗುವುದು ಎಂದರು. 12 ಅಂಕಿಗಳನ್ನು ಹೊಂದಿರುವ ಈ ಕಾರ್ಡ್ ಗಳನ್ನು ಪಡೆಯಲು ಯಾವುದೇ ಶುಲ್ಕ ತೆರಬೇಕಿಲ್ಲ ಎಂದರು.
ಈ ಸಂದರ್ಭದಲ್ಲಿ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಯೋಜನೆಯ ಸಿಇಒ ಡಾ.ರವೀಂದ್ರನ್ ಅವರು ಯೋಜನೆಯ ಬಗ್ಗೆ ಸವಿವರ ಮಾಹಿತಿ ನೀಡಿದರು. ಸೆ.26ರಂದು ದಕ್ಷಿಣ ಕನ್ನಡದಲ್ಲಿ ಅಧಿಕೃತವಾಗಿ ಆಧಾರ್ ಕಾರ್ಡ್ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಯೋಜನೆಯ ಯಶಸ್ಸಿಗೆ ಪೂರಕವಾಗಿ ಮಾನವ ಸಂಪನ್ಮೂಲ ಬಳಕೆಗೆ ಜಿಲ್ಲಾಧಿಕಾರಿಗಳಿಗೆ ಎಲ್ಲಾ ಅಧಿಕಾರ ನೀಡಲಾಗಿದೆ. ವಿಡಿಯೋಕಾನ್ಫರೆನ್ಸ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ. ಎನ್. ವಿಜಯ್ ಪ್ರಕಾಶ್, ಎಸ್.ಪಿ. ಲಾಬೂರಾಮ್, ಪ್ರಭಾರ ಅಪರ ಜಿಲ್ಲಾಧಿಕಾರಿ ಕಾವೇರಿಯಪ್ಪ ಉಪಸ್ಥಿತರಿದ್ದರು.