ಮಂಗಳೂರು,ಸೆಪ್ಟೆಂಬರ್.13: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಸವಲತ್ತುಗಳ ಬಗ್ಗೆ ಜನರಿಗೆ ತಿಳಿಸುವುದು ಮತ್ತು ನೀಡುವುದು ಅಧಿಕಾರಿಗಳ ಕರ್ತವ್ಯ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದರು.ಅವರಿಂದು ಮಂಗಳೂರಿನಲ್ಲಿ ಅಲ್ಪ ಸಂಖ್ಯಾತರ ಕುಂದು ಕೊರತೆ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪ್ರಥಮವಾಗಿ ಹಿಂದುಳಿಕೆಗೆ ಶೈಕ್ಷಣಿಕ ಕೊರತೆಯೇ ಕಾರಣ ಎಂಬುದನ್ನು ಆಯೋಗ ಕಂಡುಕೊಂಡಿದ್ದು,ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲಿಸಿದರು.ಜಿಲ್ಲೆಯಲ್ಲಿ 10ನೇ ತರಗತಿವರೆಗಿನ ಒಟ್ಟು 3,35,627 ಮಕ್ಕಳಲ್ಲಿ 1,63,429 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿದ್ದಾರೆ. ಒಟ್ಟು 94 ಮಂದಿ ಶಾಲೆಯಿಂದ ಹೊರಗುಳಿದಿದ್ದು ಅದರಲ್ಲಿ 59 ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ. 59 ಮಂದಿಯನ್ನು ಕೂಡ ಮರು ಶಾಲೆಗೆ ಸೇರಿಸುವ ಪ್ರಯತ್ನ ಆಗಿದೆ ಎಂದು ಸರ್ವಶಿಕ್ಷಣ ಅಭಿಯಾನದ ಅಧಿಕಾರಿ ಶಿವಪ್ರಕಾಶ್ ವಿವರಿಸಿದರು. ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಇಲಾಖೆ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಪ್ರತಿಯೊಂದು ಯೋಜನೆಗಳು ಸಮರ್ಪಕವಾಗಿ ಅಲ್ಪಂಸಂಖ್ಯಾತರಿಗೆ ದೊರೆಯಬೇಕು ವಿಳಂಬ ಸಲ್ಲದು ಎಂದರು.ಮೀನುಗಾರಿಕಾ ಇಲಾಖೆಯಲ್ಲಿ ಕೂಡ ಸಾಕಷ್ಟು ಸೌಲಭ್ಯಗಳು ಅಲ್ಪ ಸಂಖ್ಯಾತ ರಿಗಾಗಿ ಇದೆ. ಇದರ ಸದ್ಭಳಕೆ ಮಾಡಿ ಕೊಳ್ಳಬೇಕು. ಬೋಟ್ ಗಳಿಗೆ ಡೀಸೆಲ್ ಗಾಗಿ ಸಬ್ಸಿಡಿ ನೀಡಲಾಗುತ್ತಿದೆ. ಅಲ್ಪ ಸಂಖ್ಯಾತರಿಗೆ ಕೈಗೆಟುಕುವ ಹಾಗೆ ಇಲ್ಲಿ ಸಣ್ಣ ಐಸ್ ಪ್ಲಾಂಟನ್ನು ಮಾಡಿದರೆ ಉತ್ತಮ ಎಂದು ಮೀನುಗಾರಿಕಾ ಇಲಾಖಾ ಉಪನಿರ್ದೆಶಕ ಸುರೇಶ್ ಕುಮಾರ್ ಅವರಿಗೆ ತಿಳಿಸಿದರು.ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ವರದಿಯನ್ನು ಪರಿಶೀಲಿಸಿದ ಅಧ್ಯಕ್ಷರು ಲೇಡಿಗೋಶನ್ ಮತ್ತು ವೆನ್ಲಾಕ್ ಆಸ್ಪತ್ರೆಯ ಬಗ್ಗೆ ಬಂದ ದೂರುಗಳ ಬಗ್ಗೆ ಉತ್ತರ ನೀಡಲು ಸಂಬಂಧಿಸಿದವರನ್ನು ಕೋರಿದರು. ಈ ಹಿಂದೆ ದ.ಕ. ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿ ಹಿನ್ನೆಲೆಯಲ್ಲಿ ಹಲವು ಮಂದಿ ಕ್ರೈಸ್ತ ಸಮುದಾಯದವರ ಮೇಲೆ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಲಾಗಿದೆ. ಇದನ್ನು ವಾಪಾಸು ಪಡೆದುಕೊಳ್ಳಬೇಕು ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾಣಿಪ್ಪಾಡಿ, ತಕ್ಷಣ ಪೊಲೀಸ್ ಕಮಿಷನರ್, ಎಸ್ಪಿ ಮತ್ತು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಆಯೋಗದ ಕಾರ್ಯದರ್ಶಿ ಅತೀಕ್ ಅಹ್ಮದ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸಿಇಒ ಜಿ.ಪಂ. ಡಾ ಕೆ ಎನ್ ವಿಜಯಪ್ರಕಾಶ್, ಎಸ್ ಪಿ ಲಾಬೂರಾಮ್, ಎಸಿ ಡಾ ಎಂ ವಿ ವೆಂಕಟೇಶ್, ಆಯೋಗದ ಸದಸ್ಯರಾದ ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.