Friday, September 16, 2011

ವಾಜಪೇಯಿ ನಗರ ವಸತಿ ಹಾಗೂ ನಮ್ಮ ಮನೆ ಯೋಜನೆಯಡಿ 1325 ಮನೆ ನಿರ್ಮಿಸುವ ಗುರಿ

ಮಂಗಳೂರು,ಸೆಪ್ಟೆಂಬರ್.16:ಕರ್ನಾಟಕದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಾಜಪೇಯಿ ನಗರ ವಸತಿ ಹಾಗೂ ನಮ್ಮ ಮನೆ ಯೋಜನೆಯಡಿ ಜಿಲ್ಲೆಯ 7 ಪುರಸಭೆಗಳು ಹಾಗೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 1325 ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆಯೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾವೇರಪ್ಪ ತಿಳಿಸಿದ್ದಾರೆ.ಅವರು ಗುರುವಾರತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಯೋಜನೆಯಡಿ 1179 ಜನ ಫಲಾನುಭವಿಗಳು ಮನೆಗಾಗಿ ಅರ್ಜಿ ಸಲ್ಲಿಸಿದ್ದು,ಇವರಲ್ಲಿ 1005 ಜನ ಅರ್ಹರಾಗಿರುತ್ತಾರೆ. ಇವರಲ್ಲಿ ಆಯಾ ಸ್ಥಳೀಯಸಂಸ್ಥೆಗಳ ಆಶ್ರಯ ಸಮಿತಿಯಲ್ಲಿ 962 ಫಲಾನುಭವಿಗಳು ಆಯ್ಕೆಯಾಗಿರುತ್ತಾರೆ. ನಿಗಮದಿಂದ 665 ಫಲನುಭವಿಗಳಿಗೆ ಅನುಮೋದನೆ ದೊರಕಿದೆ,723 ಅರ್ಜಿಗಳನ್ನು ವಿವಿಧ ಬ್ಯಾಂಕುಗಳಿಗೆ ಸಾಲ ವಿತರಣೆಗೆ ಸಲ್ಲಿಸಿದ್ದು,125 ಮಂದಿಗೆ ಸಾಲ ಮಂಜೂರಾಗಿದೆ ಎಂದು ಅವರು ತಿಳಿಸಿದರು.
ಸಕರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿರುವವರಿಗೆ ಈ ಹಿಂದೆ ಹಕ್ಕು ಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು,ಈಗ ಅವಧಿ ಮಿಗಿದಿದೆ. ಆದ್ದರಿಂದ 94(3)ಭೂಸ್ವಾಧೀನಕಾಯ್ದೆಯನ್ವಯ ಅನಧಿಕೃತ ಕಟ್ಟಡಗಳಿಗೆ ಹಕ್ಕು ಪತ್ರ ನೀಡಲಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.
13 ನೇ ಹಣಕಾಸು ಆಯೋಗದಿಂದ ಜಿಲ್ಲೆಯ 7 ಸ್ಥಳೀಯಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ,ಕುಡಿಯುವ ನೀರು ಸರಬರಾಜು ಬೀದಿಬದಿ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳಿಗಾಗಿ 362.82 ಲಕ್ಷ ರೂ.ಗಳನ್ನು 2010-11 ನೇ ಸಾಲಿಗೆ ಬಿಡುಗಡೆ ಮಾಡಿದ್ದು,ಈಗಾಗಲೇ 208.17 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದ್ದು,40 ಕಾಮಗಾರಿಗಳು ಪೂರ್ಣಗೊಂಡಿವೆ.
ಎಲ್ಲಾ ಪುರಸಭೆಗಳು ತಮ್ಮ ಪಟ್ಟಣ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಕಸವನ್ನು ವಿಂಗಡಣೆ ಮಾಡಿ ವಿಲೇ ಮಾಡಲು ಈಗಾಗಲೇ ಸೂಚಿಸಿದ್ದು,ಅದರಂತೆ ಬಹುತೇಕ ಕಾರ್ಯ ನಡೆಯುತ್ತಿದೆ. ಇವು ಇನ್ನೂ ಶೀಘ್ರ ಗತಿಯಲ್ಲಿ ಅನುಷ್ಠಾನವಾಗಬೇಕಿದೆ ಎಂದು ಕಾವೇರಪ್ಪ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿಯ ಸ್ಥಳೀಯ ಸಂಸ್ಥೆಗಳಿಗೆ 2011-12 ನೇ ಸಾಲಿನಲ್ಲಿ 4282.20 ಲಕ್ಷ ರೂ.ಗಳ ಕಂದಾಯ ಬೇಡಿಕೆ ಇದ್ದು,2010 ರ ಬಾಕಿ ಕಂದಾಯ ಮೊತ್ತ 209.40 ಸೇರಿ ಒಟ್ಟು ಬೇಡಿಕೆ 4491.69 ಲಕ್ಷ ವಸೂಲಾತಿಯಾಗಬೇಕಿದೆ. 1-4-2011 ರಿಂದ 31-8-2011 ರ ವರೆಗೆ 2265.75 ಲಕ್ಷ ರೂ.ಗಳ ಕಂದಾಯ ವಸೂಲಾತಿಯಾಗಿದ್ದು,2227.94 ಲಕ್ಷ ರೂ.ಗಳ ಕಂದಾಯ ಬಾಕಿ ಇದೆ.
ಇದೇ ರೀತಿ ನೀರಿನ ತೆರಿಗೆ ಬೇಡಿಕೆ 2011-12 ನೇ ಸಾಲಿನಲ್ಲಿ 2423.96 ಲಕ್ಷ ಹಾಗೂ ಕಳೆದ ಸಾಲಿನ ಬಾಕಿ 1347.37 ಲಕ್ಷ ರೂ.ಗಳು,ಇದರಲ್ಲಿ 747.28 ಲಕ್ಷ ರೂ.ಗಳ ನೀರಿನ ತೆರಿಗೆ ಸಂಗ್ರಹವಾಗಿದೆ.
ಸಭೆಯಲ್ಲಿ ಜಿಲ್ಲಾ ಯೋಜನಾ ನಿರ್ದೇಶಕರಾದ ತಾಕತ್ ರಾವ್ ಜಿಲ್ಲಾ ಪರಿಸರ ಅಧಿಕಾರಿ ,ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಮುಂತಾದವರು ಹಾಜರಿದ್ದರು.