ಮಂಗಳೂರು,ಸೆಪ್ಟೆಂಬರ್.12:ಜಿಲ್ಲೆಯ ಪ್ರಗತಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಶ್ರಮ ಪಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು ಹೇಳಿದರು.ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದ.ಕ.ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ. ಜನಪರವಾಗಿ ಕರ್ತವ್ಯ ನಿರ್ವಹಿಸಿ ಎಂದ ಅವರು ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳ ಸೌಲಭ್ಯವನ್ನು ನೀಡಿ ಎಂದರು.
ವಿಟ್ಲದಲ್ಲಿ ಕಂದಾಯ ಇಲಾಖೆಯಲ್ಲಿ ಆರ್ ಟಿಸಿ ಅರ್ಜಿಗಳು ಇಲ್ಲದೆ ತೊಂದರೆಯಾಗುತ್ತಿದ್ದು, ಜನರು ಯಾರನ್ನು ಈ ಸಂಬಂಧ ಸಂಪರ್ಕಿಸ ಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕೇಳಿದಾಗ, ಉತ್ತರಿಸಿದ ಅಧಿಕಾರಿಗಳು, ನಾಡ ಕಚೇರಿಯಲ್ಲೂ ಅರ್ಜಿಗಳು ಲಭ್ಯವಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸೆಪ್ಟೆಂಬರ್ 24 ಮತ್ತು 25ರಂದು ನಗರದ ಟಿ ಎಂ ಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳ ಆಯೋಜಿಸಲಾಗಿದ್ದು ಮೇಳದ ಯಶಸ್ಸಿಗೆ ಎಲ್ಲರೂ ನೆರವಾಗಬೇಕೆಂದರು.ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಟ್ಟಡ ಹಾಗೂ ಮನೆ ನಿರ್ಮಾಣದ ಸಂದರ್ಭ ರಸ್ತೆಗೆ ನಿರ್ದಿಷ್ಟ ಜಾಗವನ್ನು ಬಿಡಬೇಕಾಗಿರುವುದು ಕಡ್ಡಾಯ. ಈ ಬಗ್ಗೆ ಮೂಡ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಲ್ಲಿಯೂ ಈ ಬಗ್ಗೆ ಜನರಿಗೆ ಮಾಹಿತಿ ಒದಗಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಸೂಚನೆ ನೀಡಿದರು.
ಮನೆ, ಕಟ್ಟಡಗಳ ಆವರಣ ಗೋಡೆಗಳನ್ನು ರಚಿಸುವ ಸಂದರ್ಭದಲ್ಲಿ ಉಲ್ಲಂಘನೆಗಳು ಕಂಡುಬರುತ್ತಿದ್ದು, ಗಮನ ಹರಿಸಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರಾದ ಈಶ್ವರ ಕಟೀಲ್ ಸೂಚಿಸಿದರು. ಆವರಣ ಗೋಡೆ ರಚಿಸುವಾಗಲೂ ಸ್ಥಳೀಯ ಪಂಚಾಯತ್ ನಿಂದ ಅನುಮತಿ ಪಡೆಯಬೇಕೆಂಬ ನಿಯಮವಿದೆ.ಆದರೆ ಈ ನಿಯಮವನ್ನು ಪಾಲಿಸಲಾಗುತ್ತಿಲ್ಲ. ರಸ್ತೆಯ ಜಾಗವನ್ನು ಅತಿಕ್ರಮಿಸಿ ಹಲವಾರು ಕಡೆ ಆವರಣ ಗೋಡೆ ನಿರ್ಮಾಣವಾಗುತ್ತಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು.ಆಶ್ರಯ, ಅಂಬೇಡ್ಕರ್ ವಸತಿಯೋಜನೆಗೆ ಸಂಬಂಧಿಸಿ ಜಿಲ್ಲೆಯಾದ್ಯಂತ ನಿವೇಶನ ರಹಿತರ ಪಟ್ಟಿ ಹಾಗೂ ನಿವೇಶನ ಗುರುತಿಸುವ ಕಾರ್ಯದ ಬಗ್ಗೆ ಪ್ರಗತಿ ಪರಿಶೀಲನೆಯ ಸಂದರ್ಭ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಂದ ಸೂಕ್ತ ಮಾಹಿತಿ ದೊರೆಯದ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ ಹಾಗೂ ಈಶ್ವರ ಕಟೀಲ್ ಸಭೆಯಲ್ಲಿ ಆಕ್ಷೇಪ ವ್ಯಕ್ತ ಪಡಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಒಂದು ವಾರದೊಳಗೆ ಸಂಪೂರ್ಣ ದಾಖಲೆಗಳ ಪ್ರಗತಿಯನ್ನು ತಮಗೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ನಿರ್ದೇಶನ ನೀಡಿದರಲ್ಲದೆ, ಶನಿವಾರ ಇಒಗಳ ಸಭೆ ನಡೆಸುವುದಾಗಿ ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯೋಜನೆಯಡಿ ಜಿಲ್ಲೆಯ 32 ಪಂಚಾಯಿತಿಗಳಲ್ಲಿ ಯೋಜನೆಗೆ ಚಾಲನೆ ದೊರೆತಿಲ್ಲ ಎಂದ ಉಪಕಾರ್ಯದರ್ಶಿ ಶಿವರಾಮೇಗೌಡ ಅವರು ಪ್ರತೀ ತಾಲೂಕಿನಿಂದ ಪ್ರತೀ ತಿಂಗಳು ಕನಿಷ್ಠ ಒಂದು ಕೋಟಿ ರೂ. ಯೋಜನೆಯಡಿ ಖರ್ಚಾಗಬೇಕಿದೆ ಎಂದರು.ಈ ಸಂಬಂಧ ಮಾಹಿತಿ ನೀಡಿದ ಯೋಜನಾ ನಿರ್ದೇಶಕರಾದ ಸೀತಮ್ಮ ಅವರು, ಸುಳ್ಯದ 15 ಪಂಚಾಯಿತಿ, ಬೆಳ್ತಂಗಡಿಯ 9, ಪುತ್ತೂರು, ಬಂಟ್ವಾಳದ ತಲಾ ಒಂದೊಂದು ಪಂಚಾಯಿತಿ ಹಾಗೂ ಮಂಗಳೂರಿನ 6 ಪಂಚಾಯಿತಿಗಳಲ್ಲಿ ಯೋಜನೆಗೆ ಚಾಲನೆ ದೊರಕಬೇಕಿದೆಎಂದರು.
ಚೈತನ್ಯ ಹಾಗೂ ಸ್ವಾವಲಂಬನಾ ಯೋಜನೆಗಳಡಿ ಒಟ್ಟು 70 ಮತ್ತು 120 ಫಲಾನುಭವಿಗಳನ್ನು ಗುರುತಿಸಲಾಗಿದ್ದು ಹಿಂದುಳಿದ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಉತ್ತಮ ಸಾಧನೆ ಮಾಡಿದ್ದಾರೆಎಂದರು.ಸಹಕಾರಿ ಇಲಾಖೆಯಿಂದ ಇದುವರೆಗೆ 13ಕೋಟಿ 98 ಲಕ್ಷರೂ. ಸಹಕಾರ ಸಾಲ ವಿತರಿಸಲಾಗಿದೆಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಸುಳ್ಯದಲ್ಲಿ ಅಡಿಕೆ ಕೊಳೆ ರೋಗದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗೆ ತೋಟಗಾರಿಕೆ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ವಿವರಣೆ ಕೋರಿದರು. ಆಡಳಿತದಲ್ಲಿ ಕನ್ನಡ ಬಳಕೆ ಬಗ್ಗೆ ಸಮೀಕ್ಷೆಯನ್ನು ಸಭೆ ನಡೆಸಿತು. ಬಿಸಿಎ ನಿಂದ ನೀಡಲಾಗುವ ಸೌಲಭ್ಯಗಳು, ಕೃಷಿ ಮತ್ತು ಸಣ್ಣನೀರಾವರಿ, ಸಾಮಾಜಿಕ ಅರಣ್ಯ ಇಲಾಖಾ ಯೋಜನೆಗಳ ಬಗ್ಗೆ ಸಭೆ ಚರ್ಚಿಸಿತು.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಧನಲಕ್ಷ್ಮಿ, ಸಿಪಿಒ ನಜೀರ್, ಪ್ರಭಾರ ಸಿಎಒ ಪ್ರಭಾಕರ ರಾವ್ ಸಭೆಯಲ್ಲಿ ಉಪಸ್ಥಿತರಿದ್ದರು.