ಮಂಗಳೂರು,ಸೆಪ್ಟೆಂಬರ್.24 :ಮಾನವ ಹಕ್ಕಿನ ಅಜೆಂಡಾದಲ್ಲಿ ಬದುಕುವ ಹಕ್ಕು ಅತೀ ಪ್ರಾಮುಖ್ಯವಾದ ಅಂಶವಾಗಿದ್ದು, ಈ ಜಗತ್ತಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಒಂದು ಸೂರು ಕಟ್ಟಲು ಒಂದಿಷ್ಟು ಜಾಗ ದೊರಕಿಸಿ ಕೊಟ್ಟು ,ಬದುಕಲು ಅವಕಾಶ ಮಾಡಿ ಕೊಡಲೇಬೇಕೆಂದು ಅಧಿಕಾರಿಗಳಿಗೆ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್.ಆರ್.ನಾಯಕ್ ತಿಳಿಸಿದರು.
ಅವರು ದಕ್ಷಿಣಕನ್ನಡ ಜಿಲ್ಲೆಯ ಭೇಟಿ ಸಂದರ್ಭದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡುತ್ತಿದ್ದರು.ಎಲ್ಲಾ ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಜನರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡು,ಅನರ್ಹರಿಗೆ ಸರಕಾರದ ಸವಲತ್ತುಗಳನ್ನು ದೊರಕಿಸಿ ಕೊಡದೆ, ಅರ್ಹರಿಗೆ ದೊರಕಿಸಿ ಕೊಡುವಲ್ಲಿ ಮುಂದಾಗಬೇಕೆಂದು ನುಡಿದರು. ಜನರಿಗೆ ವಾಸಿಸಲು ಒಂದು ಸೂರು,ಕುಡಿಯುವ ನೀರು,ಆಹಾರ ,ಶಿಕ್ಷಣ ಮತ್ತು ರಕ್ಷಣೆ ಕೊಡುವುದು ಮುಖ್ಯವಾಗಿದೆ. ಬೆಳ್ತಂಗಡಿಯ ತಹಶೀಲ್ದಾರರು ನೀಡಿದ ಮಾಹಿತಿಯಂತೆ, ಸುಮಾರು 4000 ಜನರು ಸೂರಿಲ್ಲದೆ ಬದುಕುತ್ತಿದ್ದಾರೆ.ಅದರಂತೆ ಇಡೀ ರಾಜ್ಯದಲ್ಲಿ ಬಹಳಷ್ಟು ಮಂದಿ ಸೂರಿಲ್ಲದೆ ಇರಬಹುದೆಂದರು. ಆದ್ದರಿಂದ ಕನಿಷ್ಠ ಪಕ್ಷ 2 ಅಥವಾ 3 ಸೆನ್ಸ್ ಜಾಗವಾದರೂ ಪ್ರತಿಯೊಬ್ಬರಿಗೂ ದೊರೆಯುವಂತಾಗಬೇಕೆಂದರು.ಈ ಸಂದರ್ಭದಲ್ಲಿ ಸಾರ್ವಜನಿಕರು ಕಾಲುದಾರಿ ಇರುವಲ್ಲಿ ರಸ್ತೆ ಕೊಡುವ ಬಗ್ಗೆ, ಒಎನ್ಜಿಸಿಯಲ್ಲಿ ಉದ್ಯೋಗ, ನಕಲಿ ವೈದ್ಯ ಎಂ.ಕೆ ಬಾಲಕೃಷ್ಣನ್,ಕೆಎಂಸಿ ಮಣಿಪಾಲದಿಂದ ಪ್ರಾವಿಂಡೆಂಟ್ ಫಂಡ್ ದೊರೆಯದ ಬಗ್ಗೆ ,ಪಂಜಿಮೊಗರು ಮರ್ಡರ್ ಕೇಸಿನಲ್ಲಿ ಅಪಾದಿತರನ್ನು ಹಿಡಿಯದ ಬಗ್ಗೆ, ಕಾರ್ಕಳದಲ್ಲಿ ದಲಿತರ ಮರಣ ಬಗ್ಗೆ ಹೀಗೆ ಹತ್ತು ಹಲವಾರು ವಿಷಯಗಳಲ್ಲಿ ಸುಮಾರು 20 ಮಂದಿ ತಮ್ಮ ಮನವಿಯನ್ನು ಸಲ್ಲಿಸಿದ್ದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಎನ್.ಎಸ್.ಚನ್ನಪ್ಪ ಗೌಡ, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.