ಮಂಗಳೂರು,ಸೆಪ್ಟೆಂಬರ್.03:ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರಸಕ್ತ ಸಾಲಿನಲ್ಲಿ 101 ಕೋಟಿ ರಾಜಸ್ವ ಗುರಿ ನಿಗದಿಪಡಿಸಲಾಗಿದ್ದು, ಕಳೆದ ಸಾಲಿನಲ್ಲಿ 94 ಕೋಟಿ ರೂ.ಗಳ ಗುರಿಯನ್ನು ಸಾಧಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಮಲ್ಲಿಕಾರ್ಜುನ್ ತಿಳಿಸಿದರು.ಇಂದು ನಗರದ ವಾರ್ತಾ ಇಲಾಖೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್.ಟಿ.ಓ ಕಚೇರಿಯಲ್ಲಿ ಒಟ್ಟು 2,01,050 ದ್ವಿಚಕ್ರ, 63075 ಲಘು ಮೋಟಾರು ವಾಹನ ಹಾಗೂ 60,660 ಸಾರಿಗೆ ವಾಹನಗಳು ನೋಂದಣಿಯಾಗಿವೆ ಎಂದರು.
ಚಾಲನಾ ಪರೀಕ್ಷೆಯಲ್ಲಿ ಕಾರ್ಯದಕ್ಷತೆ ಸುಧಾರಿಸಲು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರತಿದಿನ ಒಟ್ಟು 120 ಚಾಲನಾ ಅನುಜ್ಞಾ ಅರ್ಜಿಗಳನ್ನು ಮಾತ್ರ ಸ್ವೀಕರಿಸಲು ತೀರ್ಮಾನಿಸಲಾಗಿದೆ.ಮೂಲ್ಕಿ, ವಿಟ್ಲ ಮತ್ತು ಮೂಡುಬಿದಿರೆಯಲ್ಲಿ ತಿಂಗಳಿಗೆ ಎರಡು ಬಾರಿ ನಡೆಯುತ್ತಿದ್ದ ಶಿಬಿರಗಳನ್ನು ಇನ್ನು ಮುಂದೆ ನಾಲ್ಕು ಬಾರಿ ನಡೆಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು. ತೆರಿಗೆ ತಪ್ಪಿಸಲು ಬೇರೆ ರಾಜ್ಯದ ವಾಹನಗಳು ಮುಖ್ಯವಾಗಿ ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳಲ್ಲಿ ನೋಂದಣಿ ಮಾಡಿಸಿ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಚರಿಸುತ್ತಿರುವುದು ಕಂಡು ಬಂದಿದ್ದು, ಇದರಿಂ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿಗಳ ತೆರಿಗೆ ನಷ್ಟ ಉಂಟಾಗುತ್ತದೆ. ಅಂತಹ ವಾಹನಗಳ ಮಾಲೀಕರು 30.9.11 ರೊಳಗೆ ರಾಜ್ಯದ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸಬೇಕು, ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಆಟೋರಿಕ್ಷಾ ಮತ್ತು ಶಾಲಾ ಬಸ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕೊಂಡೊಯ್ಯಬಾರದು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಪೋಷಕರ ಮತ್ತು ಆಟೋ ಚಾಲಕರ ಜೊತೆ ಸಂವಾದ ಏರ್ಪಡಿಸಿ ಮನವರಿಕೆ ಮಾಡಿ ಕೊಡಲಾಗುವುದು ಎಂದರು.
ಎಲ್ ಪಿ ಜಿ ಚಾಲಿತ ಆಟೋರಿಕ್ಷಾ ಖರೀದಿಸುವವರಿಗೆ 15 ಸಾವಿರ ರೂಪಾ ಸಹಾಯಧನ ನೀಡಲಾಗುತ್ತಿದೆ. ರಾಜ್ಯ ಸರಕಾರ ಇದಕ್ಕಾಗಿ ರೂ. 1 ಕೋಟಿ ಮೀಸಲಿಟ್ಟಿದೆ. ಮೊದಲು ಬಂದವರಿಗೆ ಆದ್ಯತೆಯ ನೆಲೆಯಲ್ಲಿ ಈ ಸೌಲಭ್ಯ ದೊರೆಯಲಿದೆ ಎಂದು ಆರ್ ಟಿ ಒ ತಿಳಿಸಿದರು.
ನಗರದ ಸಿಟಿ ಮತ್ತು ಎಕ್ಸ್ ಪ್ರೆಸ್ ಬಸ್ ಗಳಲ್ಲಿ ಪ್ರಯಾಣಿಕರಿಗೆ ಸಮರ್ಪಕ ಟಿಕೆಟ್ ನೀಡದಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಸ್ ಮಾಲಕರಿಗೆ ಸೂಚಿಸಲಾಗಿದೆ. ಸೋಮವಾರದಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಅಂತಹ ಬಸ್ ಗಳ ವಿರುದ್ಧ ಕಾನೂನು ಕ್ರಮ ಜರಗಿಸಲಿದ್ದಾರೆ ಎಂದು ತಿಳಿಸಿದರು.
ಪರ್ಮಿಟ್ ಇಲ್ಲದ ಬಸ್ ಗಳು ಸ್ಟೇಟ್ ಬ್ಯಾಂಕ್ ಪ್ರವೇಶಿಸುವುದನ್ನು ನಿಯಂತ್ರಿಸಲು ಸ್ಟೇಟ್ ಬ್ಯಾಂಕ್ ಬಳಿ ಸಿಸಿ ಟಿವಿ ಅಳವಡಿಸುವ ಕುರಿತು ಚಿಂತನೆ ನಡೆಸಲಾಗಿದೆ.ನಗರದಲ್ಲಿ ಸೆಟೆಲೈಟ್ ಬಸ್ ನಿಲ್ದಾಣಗಳ ನಿರ್ಮಾಣ ಕುರಿತಂತೆ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದರು. ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ಅಟೋ ಸೆನ್ಸಾರ್ಡ್ ಡ್ರೈವಿಂಗ್ ಟೆಸ್ಟ್ ಆರಂಭಿಸುವ ಯೋಜನೆ ಹೊಂದಿದೆ. ಇದಕ್ಕಾಗಿ ನಾಲ್ಕು ಎಕರೆ ಭೂಮಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದಾಗ ದಕ್ಷ, ಪಾರದರ್ಶಕ ಮತ್ತು ಸಮರ್ಪಕ ರೀತಿಯಲ್ಲಿ ಹೆಚ್ಚು ಚಾಲನಾ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಲಿದೆ ಎಂದು ಮಲ್ಲಿಕಾರ್ಜುನ ತಿಳಿಸಿದರು.